Friday, January 10, 2014

ಇದು ಮೂಡನಂಬಿಕೆ ಯಲ್ಲವೇ ಸಿದ್ದರಾಮಯ್ಯನವರೇ?


ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿ ಹಲವು ರೋಗಿಗಳನ್ನು ಗುಣಪಡಿಸಿ(ದಂತೆ ನಾಟಕವಾಡಿ)ಹೋದ ಕ್ರೈಸ್ತ ಮಿಷಿನರಿ ಬೆನ್ನಿ ಹಿನ್ ಮತ್ತೊಮ್ಮೆ ಬೆಂಗಳೂರಿಗೆ ಕಾಲಿಡುತ್ತಿದ್ದೇನೆ. ಕೇವಲ ಕೈಯ ಸ್ಪರ್ಶದಿಂದ ಕುರುಡರಿಗೆ ಕಣ್ಣು ಬರುವಂತೆ ಮಾಡುವುದು, ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುವುದು, ಬರೀ ಪ್ರಾರ್ಥನೆಯಿಂದಲೇ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳನ್ನು ಗುಣಪಡಿಸುವುದು ಈತನ ಸ್ಪೆಷಾಲಿಟಿ. ಈತ ಒಂಥರಾ ಮಲ್ಟಿಸ್ಪೆಷಾಲಿಟಿ ಡಾಕ್ಟರ್. ಯಾವುದೇ ಮದ್ದು ನೀಡದೆ ರೋಗ ಗುಣ ಪಡಿಸುವ ಜಾದೂಗಾರ ವೈದ್ಯ. ಅಂದಹಾಗೆ ನಮ್ಮ ಸಿ.ಎಂ ಸಿದ್ದರಾಮಯ್ಯನವರು ಯಾವತ್ತೋ ಮೂಡನಂಬಿಕೆ ನಿಷೇಧದ ಬಗ್ಗೆ ಮಾತನಾಡಿದ್ದ ನೆನಪು. ಪಾಪ ಅವರಿಗೆ ಬರೀ ಹಿಂದೂ ಧರ್ಮದಲ್ಲಿರುವ ಮೂಡನಂಬಿಕೆಗಳ ಬಗ್ಗೆ ಮಾತ್ರ ತಿಳಿದಿದೆಯೋ ಏನೋ. ಅವರ ಸಚಿವರ ಪಟಲಾಂ ಕೂಡಾ ಬೆನ್ನಿ ಹಿನ್ ನ ಕುತಂತ್ರಗಳ ಬಗ್ಗೆ ಅವರಿಗೆ ತಿಳಿಸದೆ ಇರಬಹುದು. ಅದಕ್ಕಾಗಿ ನಾನು ತಿಳಿಸುತ್ತಿದ್ದೇನೆ.
ಬೆನ್ನಿ ಹಿನ್ ಒಬ್ಬ ಮಹಾ ವಂಚಕ. ಆತನ ಸ್ಪರ್ಶದಿಂದ ರೋಗ ಗುಣವಾದ ಒಂದು ಪುರಾವೆ ಕೂಡಾ ಇಡೀ ಜಗತ್ತಿನಲ್ಲಿಲ್ಲ. ಆತನದೇನಿದ್ದರೂ ಮುಗ್ಧ ಜನರನ್ನು ಮರುಳು ಮಾಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ಆ ಮೂಲಕ ಹಣ ಬಾಚುವ ಪಕ್ಕಾ ವ್ಯವಹಾರ. ಈತ ಜನರನ್ನು ಒಟ್ಟುಗೂಡಿಸಿ ಸಮೂಹಸನ್ನಿಗೆ ಒಳಪಡಿಸುತ್ತಾನೆ. ಆದುದರಿಂದ ಆ ಸಮಯದಲ್ಲಿ ಆತ ಮಾಡುವುದೆಲ್ಲವೂ ನಿಜ ಎಂಬ ಭ್ರಮೆ ಉಂಟಾಗುತ್ತದೆ. ವಾಸ್ತವದಲ್ಲಿ  ಆತ ಯಾವ ರೋಗವನ್ನೂ ಗುಣಪಡಿಸಿರುವುದಿಲ್ಲ. ಈ ಬಗ್ಗೆ ಈತನಿಂದ ಸ್ಫರ್ಶ ಪಡೆದು ತಮ್ಮ ರೋಗ ಗುಣವಾಗಿದೆ ಎಂದು ಹೇಳಿಕೊಂಡಿದ್ದ ಬಹುತೇಕ ಎಲ್ಲರೂ ನಂತರದ ದಿನಗಳಲ್ಲಿ ನಾವು ಆತನ ಪ್ರಭಾವಕ್ಕೆ ಒಳಗಾಗಿ ಈ ರೀತಿಯ ಹೇಳಿಕೆ ನೀಡಿದ್ದೆವು ಎಂಬುದನ್ನು ಒಪ್ಪಿದ್ದಾರೆ. ಬೆನ್ನಿಹಿನ್ ಕಪಟವನ್ನರಿತ ಹಲವು ಕ್ರೈಸ್ತ ದೇಶಗಳು ಹಾಗೂ ಸಂಘಗಳು ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಆದರೆ ನಮ್ಮದು ಏನಿದ್ದರೂ  ವೋಟ್‌ಬ್ಯಾಂಕ್ ರಾಜಕೀಯ ನೋಡಿ. ಹಾಗಾಗಿ ಬೆನ್ನಿ ಹಿನ್ ಅಲ್ಲ ಅಲ್ಪಸಂಖ್ಯಾತರ ಪರವಾಗಿ ಯಾವ ಬಾಬಾ, ಮಾಟಗಾರ ಅಥವಾ ದೇಶವನ್ನು ಸೂರೆಗೈಯ್ಯುವವನೇ ಬಂದರೂ ಆತನನ್ನು ಸ್ವಾಗತಿಸುವುದು ನಮ್ಮ ಪರಮ ಧರ್ಮ. ಈ ಹಿಂದೆ ಬೆನ್ನಿಹಿನ್ ಬೆಂಗಳೂರಿಗೆ ಆಗಮಿಸಿದ್ದಾಗ ಅಂದಿನ ಧರಂ ಸಿಂಗ್ ಸರಕಾರ ಕಾನೂನನ್ನೇ ಉಲ್ಲಂಘಿಸಿ ಆತನಿಗೆ ಇಲ್ಲಿ ಸಭೆ ನಡೆಸಲು ಅನುಮತಿ ನೀಡಿತ್ತು. ಅಂಥ ಮಹಾನ್ ರಾಜಕೀಯ ನಮ್ಮದು. ಅಂಥದ್ದರಲ್ಲಿ ಈಗ ಅದೇ ಪಕ್ಷದ ಸಿ.ಎಂ ತಾವೇ ಮಾಡಿರುವ ಮೂಡನಂಬಿಕೆ ನಿಷಿದ್ಧ ಕಾನೂನನ್ನು ಬೆನ್ನಿಹಿನ್‌ಗಾಗಿ ಸ್ವಲ್ಪ ಸಮಯ ನಂತರ ಜಾರಿಗೆ ತಂದರೆ ಯಾವ ಮಹಾನ್ ತಪ್ಪಾದೀತು, ಅಲ್ಲವೇ?. ಆತ ತನ್ನ ಸಭೆ ನಡೆಸಿ, ಇಲ್ಲಿ ರಾಜನಂತೆ ಮೆರೆದು, ಜನರನ್ನು ಮೋಸಗೊಳಿಸಿ ಒಂದಿಷ್ಟು ಹಣ ಲಪಟಾಯಿಸಿ ಹೋದ ನಂತರ ಪುನಃ ಹಿಂದೂಗಳ ಮೇಲೆ ಮೂಡನಂಬಿಕೆ ನಿಷೇಧ ಕಾಯಿದೆಯನ್ನು ಹೇರಿದರಾಯಿತು. ಎಷ್ಟಾದರೂ ಹಿಂದೂಗಳು ಇರುವುದೇ ರಾಜಕಾರಣಿಗಳ ಕಪಟ ನಾಟಕಗಳಿಗೆ ಬಲಿಯಾಗಲು. ಈ ಬಾರಿಯೂ ಆ ನಾಟಕ ನಡೆಯಲಿ.
ಕ್ರೈಸ್ತರು ತಮ್ಮ ಧರ್ಮ ಹಾಗೂ ದೇವರಿಗೆ ಅತ್ಯಂತ ಗೌರವ ನೀಡುವವರು. ಅವರ ಭಕ್ತಿ ಹಾಗೂ ಅರ್ಪಣೆಯು ಪ್ರಶ್ನಾತೀತ. ಆದರೆ ದೇವರ ಹೆಸರಲ್ಲಿ ಬಡವರನ್ನು ಸುಲಿಯುವ ಬೆನ್ನಿಹಿನ್‌ನಂಥ ಮೋಸಗಾರನಿಗೆ ಪ್ರೋತ್ಸಾಹ ನೀಡುವುದು ಯಾಕೆ. ಕೇವಲ ಸ್ಪರ್ಶ ಮಾತ್ರದಿಂದ ರೋಗಗಳು ಗುಣಮುಖವಾಗುವುದಿದ್ದರೆ ಕ್ರೈಸ್ತರಲ್ಲಿ ಒಬ್ಬನಾದರೂ ರೋಗಿ ಅಥವಾ ಅಂಗವಿಕಲ ಇರುತ್ತಿದ್ದನೇ? ಇದನ್ನು ಕ್ರೈಸ್ತರೂ ಕೂಡಾ ಅರಿತುಕೊಳ್ಳಬೇಕಿದೆ. ಏಸು ಸ್ವಾಮಿಯನ್ನು ಪೂಜಿಸಲು ಮನೆಗಳಲ್ಲಿ, ಚರ್ಚ್‌ಗಳಲ್ಲಿ ಬೇಕಾದಷ್ಟು ಅವಕಾಶವಿದೆ. ಅದಕ್ಕಾಗಿ ಬೆನ್ನಿಹಿನ್ ಹಿಂದೆ ಹೋಗಬೇಕಾದ ಅನಿವಾರ್ಯತೆಯಿಲ್ಲ. ಹಿಂದೂಗಳಲ್ಲಿ ಅಸಾರಾಂ, ನಿತ್ಯಾನಂದ ಹೇಗೋ ಬೆನ್ನಿಹಿನ್ ಕೂಡಾ ಅದೇ ಪಂಗಡಕ್ಕೆ ಸೇರಿದಾತ. ಇವರಿಗೆಲ್ಲಾ ಧರ್ಮದ ಮೇಲೆ ಗೌರವವಿರುವುದಿಲ್ಲ ಅವರದ್ದೇನಿದ್ದರೂ ವ್ಯಾಪಾರಿ ಮನೋಭಾವ. ಹಣ ಸಂಪಾದಿಸುವುದು, ಐಷಾರಾಮಿ ಜೀವನ ಸಾಗಿಸುವುದು ಇವರ ಮುಖ್ಯ ಉದ್ದೇಶ. ಸರಕಾರ ವೋಟಿಗಾಗಿ ಜನರ ಹಿತಾಸಕ್ತಿಯನ್ನು ಕೊಲ್ಲಲು ಸದಾ ಸಿದ್ಧವಾಗಿಯೇ ಇರುತ್ತದೆ. ಅದರಲ್ಲೇನೂ ಆಶ್ಚರ್ಯವಿಲ್ಲ. ಆದರೆ ಕಪಟಿಯೊಬ್ಬನ ಕೈಯಿಂದ ಮೋಸಹೋಗದಂತೆ ಜನರನ್ನು ಜಾಗೃತಗೊಳಿಸುವುದು ಜನಸಾಮಾನ್ಯರ ಕರ್ತವ್ಯ. ಈ ಬಗ್ಗೆ ಪ್ರಜ್ಞಾವಂತ ಕ್ರೈಸ್ತರೂ ಕೂಡಾ ಜಾಗೃತರಾಗಬೇಕಿದೆ.
ಈ ಬಾರಿ ಬೆನ್ನಿಹಿನ್ ಬೆಂಗಳೂರಿನ ಯಲಹಂಕದಲ್ಲಿ ಸಭೆ ನಡೆಸಲಿದ್ದಾನೆ. ಸಿ.ಎಂ ಸಿದ್ದರಾಮಯ್ಯನವರ ಸಮೇತ ಎಲ್ಲಾ ಮಂತ್ರಿಗಳು ಅಲ್ಲಿಗೆ ತೆರಳಿ ಆತನ ಪವಾಡಗಳನ್ನು ಕಣ್ಣಾರೆ ಕಂಡು ಧನ್ಯರಾದರೆ ರಾಜ್ಯದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವು ಉಪಾಯಗಳು ಸಿಗಬಹುದು. ಹಾಗಾದಾಗ ಸರಕಾರದ ವತಿಯಿಂದ ರೋಗಿಗಳಿಗೆ ನೀಡಲಾಗುವ ಸವಲತ್ತಿನ ಖರ್ಚು ಉಳಿದು ಬೊಕ್ಕಸಕ್ಕೆ ಅಪಾರ ಲಾಭವಾಗಬಹುದು. ಏನಂತೀರಿ. ಸಿ.ಎಂ ಸಾಹೆಬ್ರೆ?

No comments:

Post a Comment