ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ರಾಜ್ಯದ ಸಚಿವರಿಗೆ ಆರು ಪ್ರಶ್ನೆಗಳನ್ನು ಕೇಳಲಾಗಿತ್ತು. ಇದರಲ್ಲಿ ಆರು ಶಾಸಕರು ಅಪೂರ್ಣ ಉತ್ತರವನ್ನು ನೀಡಿದ್ದರೆ ಉಳಿದ ೧೬ ಶಾಸಕರು ಉತ್ತರ ನೀಡುವ ಗೋಜಿಗೆ ಹೋಗಿಲ್ಲ. ಸಚಿವರ ಈ ಕಾರ್ಯವೈಖರಿಯ ಬಗ್ಗೆ ರಾಜ್ಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಲ್ಲದೆ ಕೆಲವು ಶಾಸಕರು ಮಾಹಿತಿ ಹಕ್ಕು ಅಧಿನಿಯಮ ಕಾಯ್ದೆಯನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆ ಆರು ಪ್ರಶ್ನೆಗಳು
ಪ್ರಶ್ನೆ೧: ಸಚಿವರಾದ ನಂತರ ಕಳೆದ ಆರು ತಿಂಗಳಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಯಾವ ಯಾವ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿರುವಿರಿ ಎಂಬ ಬಗ್ಗೆ ದಿನಾಂಕ ಹಾಗೂ ಸಮಯಗಳೊಂದಿಗೆ ವಿವರ ನೀಡುವುದು.
ಪ್ರಶ್ನೆ ೨: ಆರು ತಿಂಗಳ ಅವಧಿಯಲ್ಲಿ ನಡೆಸಲಾದ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಇಲಾಖೆಗೆ ಸಂಬಂಧಿಸಿದಂತೆ ಕಂಡುಬಂದಿರುವ ಲೋಪದೋಷಗಳು ಹಾಗೂ ಇವುಗಳನ್ನು ಸರಿಪಡಿಸಲು ಮತ್ತು ಇಲಾಖೆಯಲ್ಲಿ ಸುಧಾರಣೆ ತರಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸಭೆಗಳ ದಿನಾಂಕ ಮತ್ತು ಸ್ಥಳಗಳೊಂದಿಗೆ ವಿವರ ನೀಡುವುದು:
ಪ್ರಶ್ನೆ೩: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನಾಂಕದಿಂದ ಇಲ್ಲಿಯವರೆಗೆ ಸಾರ್ವಜನಿಕರಿಂದ ತಮ್ಮ ಕಚೇರಿಯಲ್ಲಿ ಸ್ವೀಕರಿಸಲಾದ ಅರ್ಜಿಗಳ ಸಂಖ್ಯೆ ಹಾಗೂ ಇವುಗಳಲ್ಲಿ ವಿಲೇವಾರಿ ಮಾಡಲಾದ ಅರ್ಜಿಗಳು ಮತ್ತು ಬಾಕಿ ಉಳಿದ ಅರ್ಜಿಗಳ ಹಾಗೂ ಈ ರೀತಿ ಬಾಕಿ ಇರುವುದಕ್ಕೆ ಇರುವ ಕಾರಣಗಳ ವಿವರ ನೀಡುವುದು.
ಪ್ರಶ್ನೆ೪: ಉಸ್ತುವಾರಿ ಸಚಿವರಾಗಿರುವ ಜಿಲ್ಲೆಗಳಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಮತ್ತು ೨೦ ಮತ್ತು ೧೫ ಅಂಶಗಳ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿರುವ ದಿನಾಂಕ ಹಾಗೂ ಸ್ಥಳಗಳೊಂದಿಗೆ ವಿವರ ನೀಡುವುದು.
ಪ್ರಶನೆ೫: ಪಕ್ಷದ ಅಧ್ಯಕ್ಷರ ನಿರ್ದೇಶನದ ಪ್ರಕಾರ ತಾವುಗಳು ಪಕ್ಷದ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ದಿನಾಂಕಗಳ ವಿವರ ನೀಡುವುದು.
ಪ್ರಶ್ನೆ೬: ತಮ್ಮ ಕ್ಷೇತ್ರದ ಅಭಿವೃದ್ಧಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವಿವರ ಹಾಗೂ ಜನತಾ ದರ್ಶನ ನಡೆಸಿದ ಕಾರ್ಯಕ್ರಮಗಳ ವಿವರ ನೀಡುವುದು.
ಇದಕ್ಕೆ ಆರೋಗ್ಯ ಸಚಿವರಾದ ಯು.ಟಿ.ಖಾದರ್‌ರವರು ಆರು ಪ್ರಶ್ನೆಗಳಿಗೂ ಅಪೂರ್ಣವಾದ ಉತ್ತರ ನೀಡಿದ್ದಾರೆ. ಅಲ್ಲದೆ ಆಯಾ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುತ್ತಾರೆ ಎಂದಷ್ಟೆ ಹೇಳಿ ಉತ್ತರದಿಂದ ಜಾರಿಕೊಂಡಿದ್ದಾರೆ. ಅಲ್ಲದೆ ಸ್ವೀಕರಿಸದ ಅರ್ಜಿ ಹಾಗೂ ವಿಲೇವಾರಿಗೊಂಡ ಅರ್ಜಿಯ ಬಗ್ಗೆ ಹಾಗೂ ತಾವು ಭೇಟಿ ನೀಡಿದ ಸ್ಥಳದ ಬಗ್ಗೆ ಯಾವ ಮಾಹಿತಿಯನ್ನೂ ನೀಡಲಿಲ್ಲ. ಅಲ್ಲದೆ ಕೊನೆಯ ಪ್ರಶ್ನೆಗೆ ತನಗದು ಅನ್ವಯಿಸುವುದಿಲ್ಲ ಎಂದಷ್ಟೇ ಹೇಳಿದ್ದಾರೆ.
ವಸತಿ ಸಚಿವರಾದ ಅಂಬರೀಷ್‌ರವರು ಆಯಾಯ ಜಿಲ್ಲೆಗಳಿಗೆಗೆ ಭೇಟಿ ನೀಡಿದ ವಿವರಣೆಗಳನ್ನಷ್ಟೇ ನೀಡಿದ್ದಾರೆ. ಅಲ್ಲದೆ ಎರಡನೇ ಪ್ರಶ್ನೆಗೆ ಅಧಿಕಾರಗಳ ಜೊತೆ ಪ್ರತೀವಾರ ಚರ್ಚೆ ನಡೆಸುತ್ತೇನೆ ಎಂದಷ್ಟೇ ಹೇಳಿದ್ದಾರೆ.ಇವರು ಇದುವರೆಗೆ ೧೯೭೭ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಿದ್ದಾರೆ. ಅಲ್ಲದೆ ಕೆ.ಇ.ಡಿಬಿ ಸಭೆಗಳನ್ನು ಮಾಡಿದ್ದು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದ್ದಾರೆ.
ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಸಂಬಧಿಸಿದವರಿಗೆ ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ನಿಯಮ೬(೨) ದಂತೆ ವರ್ಗಾಯಿಸಲಾಗಿದೆ. ಎಂದು ಎರಡು ಹಾಗೂ ನಾಲ್ಕನೇ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇವರು ಒಟ್ಟು ೬೨೪೬ ಅರ್ಜಿಗಳನ್ನು ಸ್ವೀಕರಿಸಿ ಎಲ್ಲವನ್ನೂ ವಿಲೇವಾರಿಗೊಳಿಸಿದ್ದಾರೆ. ಅಲ್ಲದೆ ಉಳಿದ ಪ್ರಶ್ನೆಗಳಿಗೆ ಉತ್ತರಿಸಲು ಹೋಗಲೇ ಇಲ್ಲ.
ಯುವಜನ ಸೇವೆ ಮೀನುಗಾರಿಕೆ ರಾಜ್ಯ ಸಚಿವರಾದ ಅಭಯಚಂದ್ರ ಜೈನ್ ತಾವು ಭೇಟಿ ನೀಡಿದ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ. ಅಲ್ಲದೆ ಮೊದಲ, ನಾಲ್ಕನೇ ಪ್ರಶ್ನೆಗಳಿಗೆ ವಿವರಗಳನ್ನು ಲಗತ್ತಿಸಲಾಗಿದೆ ಎಂಬಷ್ಟೇ ಉತ್ತರವನ್ನು ನೀಡಿದ್ದಾರೆ. ೧೬೮೪ ಅರ್ಜಿಗಳನ್ನು ವಿಲೇವಾರಿ ಗೊಳಿಸಲಾಗಿದ್ದು ಬಾಕಿ ಉಳಿಸಿಲ್ಲ. ಬಾಕಿ ಉಳಿದ ಪ್ರಶ್ನೆಗಳಿಗೆ ಅಪರಿಪೂರ್ಣ ಉತ್ತರ ನೀಡಿ ಕೈತೊಳೆದುಕೊಂಡಿದ್ದಾರೆ.
ಕೃಷಿ ಮಾರುಕಟ್ಟೆ, ಮತ್ತು ತೋಟಗಾರಿಕೆ ಸಚಿವರಾದ ಶ್ಯಾಮನೂರು ಶಿವಶಂಕರಪ್ಪ ಮೊದಲ ಪ್ರಶ್ನೆಗೆ ಸಭೆಯ ವಿವರಗಳನಷ್ಟೇ ನೀಡಿ ಉಳಿದ ಐದು ಪ್ರಶ್ನೆಗಳಿಗೆ ಉತ್ತರ ನೀಡದೆ ತಪ್ಪಿಸಿಕೊಂಡಿದ್ದಾರೆ.
ಜವಳಿ, ಬಂದರು, ಹಾಗೂ ಒಳನಾಡು ಹಾಗೂ ಸಾರಿಗೆ ಸಚಿವರಾದ ಬಾಬುರಾವ್ ಚಿಂಚನಸೂರು ವಿವರಗಳನ್ನು ಪ್ರತ್ಯೇಕ ಅನುಬಂಧದಲ್ಲಿ ಲಗತ್ತಿಸಲಾಗಿದೆ ಎಂದಷ್ಟೇ ಉತ್ತರಿಸಿದ್ದಾರೆ. ಇವರು ೨೪೦೩ ಅರ್ಜಿಗಳನ್ನು ಸ್ವೀಕರಿಸಿ ಎಲ್ಲಾ ಅರ್ಜಿಗಳನ್ನು ವಿಲೇವಾರಿಗೊಳಿಸಿದ್ದಾರೆ. ಅಲ್ಲದೆ ನಾಲ್ಕನೇ ಪ್ರಶ್ನೆಗೆ ಇದುವರೆಗೂ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯನಿರ್ವಹಣಾಧಿಕಾರಿ ಯಾದಗಿರಿ ಜಿಲ್ಲೆ ಇಲ್ಲಿ ಜರಗಿಸಲಾಗಿದೆ. ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಷ್ಟೇ ಹೇಳಿ ಉಳಿದ ಯಾವ ಪ್ರಶ್ನೆಗಳಿಗೂ ಉತ್ತರಿಸಲು ಹೋಗಿಲ್ಲ. ವಕ್ಫ್ ಸಚಿವ ಖಮರುಲ್ ಇಸ್ಲಾಂರವರು ಕ್ರಮಕೈಗೊಳ್ಳಲಾಗಿದೆ ಎಂದಷ್ಟೆ ಉತ್ತರಿಸಿದ್ದಾರೆ. ಇದರಲ್ಲಿ ಉತ್ತರ ನೀಡದ ೧೬ ಸಚಿವರುಗಳ ಪೈಕಿ ಅರಣ್ಯ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥರೈ ಕೂಡಾ ಉತ್ತರಿಸಲು ಹೋಗಿಯೇ ಇಲ್ಲ.
ಆರು ತಿಂಗಳು ಕಳೆದರೂ ಅಭಿವೃದ್ಧಿಗೆ ಶ್ರಮಿಸದೇ ಇರುವ ಸಚಿವರ ಹೊಣೆಗೇಡಿತನ ಮಾಹಿತಿಹಕ್ಕಿನಿಂದ ಬಯಲಾಗಿದ್ದು ರಾಜ್ಯದ ಜನರು ಹಿಡಿಶಾಪ ಹಾಕಿದ್ದಾರೆ.
No comments:
Post a Comment