Friday, January 10, 2014

ವಿಶ್ವನುಡಿಸಿರಿ ವಿರಾಸತ್;
ಇದು ಬಂಡವಾಳಶಾಹಿಗಳ ಕೂಟವಲ್ಲ
ಆಳ್ವಾಸ್ ವಿಶ್ವ ನುಡಿಸಿರಿ ಬಂಡವಾಳಶಾಹಿಗಳ ಕೂಟವೆಂದು ಜರೆದವರೇ ಜಾಸ್ತಿ. ಅದಕ್ಕೆ ಪರ್ಯಾಯವಾಗಿ ಜನನುಡಿಯೂ ಮಾರ್ದನಿಸಿತು. ಆಳ್ವರದು ಶಿಕ್ಷಣದ ವ್ಯಾಪಾರೀಕರಣ ಎಂದೂ ಜರೆಯಲಾಯಿತು. ಆದರೆ ಕಾರ್ಯಕ್ರಮದ ರೂವಾರಿ ಮೋಹನ್ ಆಳ್ವರು ಇದೆಕ್ಕೆಲ್ಲಾ ಸೊಪ್ಪು  ಹಾಕದೆ ಕಾರ್ಯಕ್ರ ನಡೆಸಿಯೇ ಬಿಟ್ಟರು. ಅಲ್ಲಿ ಗೊಂದಲವಿರಲಿಲ್ಲ, ಎಡರುತೊಡರುಗಳಿರಲಿಲ್ಲ, ನಾಲ್ಕು ದಿನಗಳ ಶಿಸ್ತುಬದ್ಧ ಕಾರ್ಯಕ್ರಮವು ಆಳ್ವಾಸ್ ವೇದಿಕೆಯ ಹಲವಾರು ವೇದಿಕೆಗಳಲ್ಲಿ ನಡೆದೇ ಹೋಯ್ತು, ಆ ಮೂಲಕ ಕನ್ನಡ ಮನಸ್ಸುಗಳ ಭಾವನೆಗಳು ಒಂದಕ್ಕೊಂದು ಮೇಳಯಿಸಿದವು.
ಆಳ್ವಾಸ್ ನುಡಿಸಿರಿಯನ್ನು ಬಂಡವಾಳಶಾಹಿಗಳ ಕೂಟ, ನುಡಿಸಿರಿಯ ಆಶಯ ಮಾಯವಾಗಿದೆ, ಫ್ಯಾಸಿಸ್ಟ್ ಮನುವಾದಿಗಳು ಹೂಂಕರಿಸುತ್ತಿದ್ದಾರೆ ಎಂದೆಲ್ಲಾ ವಾದಿಸಿದಾಗ ಯಾವನೇ ಒಬ್ಬ ವ್ಯಕ್ತಿ ಬಿದ್ದುಹೋಗುವುದು ಸಾಮಾನ್ಯ. ಈ ಎಡಪಂಥೀಯ ಪ್ರಗತಿಪರ ಮನಸ್ಸುಗಳನ್ನು ನೋಯಿಸಿದರೆ ಆತನ ಒಂದು ಅಧ್ಯಾಯ ಮುಗಿದೇ ಹೋಯ್ತು ಎನ್ನುವ ಕಾಲವೊಂದಿತ್ತು. ಆದರೆ ಬದಲಾವಣೆಯ ಬಿರುಗಾಳಿ ಕನ್ನಡ ಸಾಹಿತ್ಯಕ್ಕೂ ತಗಲಿರುವಿದರಿಂದ ನುಡಿಸಿರಿಗೆ ಯಾವುದೇ ಪೆಟ್ಟು ನೀಡಲಿಲ್ಲ. ನೀವು ಏನು ಬೇಕಾದರೂ ಹೇಳಿ, ನಾನು ಕಾರ್ಯಕ್ರಮ ಮಾಡಿಯೇ ತೀರುತ್ತೇನೆ, ನೀವು ಜಪ್ಪಯ್ಯ ಎಂದರೂ ನಾನೇನೂ ಕಾರ್ಯಕ್ರಮ ನಿಲ್ಲಿಸುವುದಿಲ್ಲ, ಎಲ್ಲರನ್ನೂ ಸಂತುಷ್ಟರನ್ನಾಗಿಸುವುದು ಕಷ್ಟದ ಕೆಲಸ ಎಂಬುದು ಆಳ್ವರು ಹೇಳಿದ್ದಾರೆ, ಇದು ಪರೋಕ್ಷವಾಗಿ ಪ್ರಗತಿಪರರ ವಾದಕ್ಕೆ ಆಳ್ವರದು ಪ್ರತಿವಾದ ಎಂದು ಭಾವಿಸಲಾಗುತ್ತಿದೆ, ಒಟ್ಟಿನಲ್ಲಿ ಸಾಹಿತ್ಯ ಜಾತ್ರೆ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ.
ನುಡಿಸಿರಿಯ ಯಾವುದೇ ವೇದಿಕೆಗಳಲ್ಲೂ ಬಂಡವಾಳ ಶಾಹಿಗಳ ಕಾಣಲಿಲ್ಲ. ಉದ್ಯಮಪತಿಗಳು, ಕಾರ್ಮಿಕರನ್ನು ನಾಯಿಯಂತೆ ದುಡಿಸಿ ಸಂಬಳ ಕೊಡುವಾಗ ಮೂದಲಿಸುವವರಾಗಲೀ, ಸಾಫ್ಟ್‌ವೇರ್ ಕಂಪೆನಿಗಳಲ್ಲಿ ದುಡಿಯುವ ಕೋಟಿಗಟ್ಟಲೆ ಹಣ ಹೊಂದಿರುವ ವ್ಯಕ್ತಿಗಳಾಗಲೀ ಎಲ್ಲೂ ಕಂಡುಬರಲಿಲ್ಲ, ಬದಲಿಗೆ ತನ್ನ ಕಲೆಯೇ ಸರ್ವಸ್ವ, ಅದಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿಕೊಂಡು ಕೂಲಿಕಾರ್ಮಿಕರಿಗಿಂತಲೂ ಕಡೆಯಾಗಿ ಬದುಕುವ ಕಲಾವಿದರು ಕಂಡುಬಂದರು. ಅಲೆಮಾರಿಯಾಗಿ ತಿರುಗಾಡಿಕೊಂಡು ‘ತನ್ನ ಕಲೆ ಉಳಿದರೆ ಸಾಕಪ್ಪಾ, ಪ್ರೋತ್ಸಾಹಿಸುವವರು ಯಾರೂ ಇಲ ಎಂದು ಹೆಣಗಾಡುವ ಅಲೆಮಾರಿ ಡೊಂಬರು ಹೀಗೆ ಅಲ್ಲಿ ಕಂಡುಬಂದರು. ಈ ಸಾಹಿತ್ಯದಿಂದ ನಯಾಪೈಸೆಯೂ ಸಿಗುವುದಿಲ್ಲ, ಆದರೂ ಇದನ್ನು ಬಿಡಲಾಗುವುದಿಲ್ಲ, ಯಾರ ಕಾಲಿಗೂ ಬೀಳದ ತನ್ನ ಸಾಹಿತ್ಯ ಕೃಷಿಯನ್ನು ಎಲೆಮರೆಯ ಕಾಯಾಗಿ ಮಾಡಿಕೊಂಡು ಕನ್ನಡಮ್ಮನ ಸೇವೆ ಮಾಡುತ್ತಿರುವ ಬಡ ಸಾಹಿತಿಗಳು ಕಂಡುಬಂದರು. ಅಲ್ಲದೆ ವೆಸ್ಟರ್ನ್ ಸ್ಟೈಲಿಷ್‌ಗಳ ಮಧ್ಯೆ ನಾನೂ ಒಬ್ಬನಿದ್ದೇನೆ ಎಂದು ಸಾರಿ ಹೇಳುವಂತೆ ಕಾಣುವ ಜನಪದರು ಕಂಡುಬಂದರು. ಇದನ್ನೆಲ್ಲಾ ಅನುಭವಿಸಬೇಕು, ಸನಾತನ ಸಂಸ್ಕೃತಿ ಎಂದರೆ ಇಷ್ಟೆಲ್ಲಾ ಇದೆಯಪ್ಪಾ ಅಯ್ಯೋ ರಾಮ ಎಂದು ಕೀಳರಿಮೆ ಬದಿಗಿಟ್ಟು ಬಂದಿರುವ ಸಾವಿರಾರು ಮಂದಿ ಕಲಾಸಕ್ತರು ಬಂದಿದ್ದರು.
ಹಾಗಾದರೆ ಇದು ನಿಜವಾಗಿಯೂ ಬಂಡವಾಳ ಶಾಹಿಗಳ ಕೂಟವಲ್ಲ, ಶಿಕ್ಷಣದ ವ್ಯಾಪಾರೀಕರಣವೂ ಅಲ್ಲ, ಬಂಡವಾಳ ಹೂಡಿ ಹಣ ಮಾಡುವ ಲಕ್ಷಾಂತರ ಅವಕಾಶಗಳಿದ್ದರೂ ಅದನ್ನೆಲ್ಲಾ ಬದಿಗಿಟ್ಟು ಕನ್ನಡ  ಜನರು ಕನ್ನಡ ಮಾತಾಡಬೇಕು, ಹಿಂದಿನ ಸನಾತನ ಸಂಸ್ಕೃತಿ ಉಳಿಯಬೇಕು, ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು ಎಂಬ ದಿವ್ಯದೃಷ್ಟಿಯಿಂದಾಗಿ ಆಳ್ವಾಸ್ ನುಡಿಸಿರಿ ವಿಶ್ವಮಟ್ಟದಲ್ಲಿ ಅನಾವರಣಗೊಳ್ಳುತ್ತಿದೆ.
ಕನ್ನಡ ವಿಶ್ವ ಭಾಷೆಯಾಗಬೇಕಾದರೆ ಅದನ್ನು ಆಧುನೀಕತೆಗೆ ತಕ್ಕಂತೆ ಒಗ್ಗಿಸಬೇಕಾಗುತ್ತದೆ. ಇಷ್ಟರವರೆಗೆ ಕನ್ನಡ ಸಾಹಿತಿಗಳು, ಬಲ, ಎಡ ಎಂಬ ಜಿದ್ದಿಗೆ ಬಿದ್ದು ಬೀದಿ ಕಾಳಗ ಮಾಡಿದ್ದೇ ಹೆಚ್ಚು. ಕನ್ನಡ ಎಷ್ಟರ ಮಟ್ಟಿಗೆ ಕೊಚ್ಚೆಯ ತಿಪ್ಪೆಗುಂಡಿಯಾಗಿದೆಯೆಂದರೆ ಬೀದಿಯಲ್ಲಿ ಮೈಕ್ ಇಟ್ಟು ಒಟ್ರಾಸಿ ಬಾಯಿಗೆ ಬಂದಂತೆ ಅರಚಿ ತನ್ನ ತೀಟೆ ತೀರಿಸುವ ಮಟ್ಟಿಗೆ ದುರವಸ್ಥೆ ಪಡುತ್ತಿದೆ. ಇದಕ್ಕೆಲ್ಲಾ ನಮ್ಮ ಕನ್ನಡ ಸಾಹಿತಿಗಳೇ ಕಾರಣವೆಂದು ಸ್ವಲ್ಪ ಮತಿ ಇದ್ದವನಿಗೂ ಗೊತ್ತಾಗುತ್ತೆ ಬಿಡಿ. ಬೆಂಗಳೂರಿನಲ್ಲೊಂದು ಸೈಟ್ ಪಡೆಯುವುದಕ್ಕೋಸ್ಕರವೇ ಬರೆಯುವವರಿಗೇನೂ ನಮ್ಮಲ್ಲಿ ಕೊರತೆ ಇಲ್ಲ, ಯಾವ ರಾಜಕೀಯ ಪುಡಾರಿಗಿಂತಲೂ ಕಡಿಮೆ ಇರದ ಸಾಹಿತಿ ವರ್ಗದಿಂದಲೇ ಇಂದು ಕನ್ನಡ ಗಬ್ಬೆನ್ನುತ್ತಿದೆ. ಇದನ್ನೆಲ್ಲಾ ದಾಟಿ ಬರಬೇಕಾದರೆ ಕನ್ನಡದ ವಿಶಿಷ್ಠ ಶಕ್ತಿ ಇಡೀ ಜಗತ್ತಿಗೆ ಮನವರಿಕೆಯಾಗಬೇಕು.
ಇದನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸಿದ ಆಳ್ವರು ಬೇರೆಯದೇ ರೀತಿಯಲ್ಲಿ ಚಿಂತಿಸಿದರು. ಅವರಿಗೆ ಬಾಯಿಗೆ ಬಂದಂತೆ ಬರೆದು ರಾಜಕೀಯ ಮಾಡಲು ತಿಳಿದಿಲ್ಲ. ಕನ್ನಡವನ್ನು ವೈಭವೀಕರಿಸುವ ನಿಟ್ಟಿನಲ್ಲಿ ಎಲ್ಲಾ ಸಮಾನ ಮನಸ್ಕರನ್ನು ಒಟ್ಟು ಸೇರಿಸಿದರ ಪರಿಣಾಮವಾಗಿ ಇಂದು ನುಡಿಸಿರಿಯಾಗಿ ಕನ್ನಡ ಮನಸ್ಸಿನ ಆಶಯ ಇಂದು ಬಿಚ್ಚಿಕೊಳ್ಳುತ್ತಿದೆ,
ನುಡಿಸಿರಿಯ ಹತ್ತನೇ ವರ್ಷದ ಸಂಭ್ರಮದಲ್ಲಿ ಆಳ್ವಾಸ್ ಕಂಗೊಳಿಸುತ್ತಿದೆ. ಈ ಬಗ್ಗೆ ಆಶಯ ಭಾಷಣ ಮಾಡಿದ ನುಡಿಸಿರಿಯ ಸಮ್ಮೇಳನಾಧ್ಯಕ್ಷ ಬಿ.ವಿ. ವಿವೇಕ ರೈ ಕನ್ನಡ ವಿಶ್ವಭಾಷೆಯಾಗಬೇಕಾದರೆ ಅದಕ್ಕೆ ಒಂದು ಜಾಗತಿಕ ಶಿಷ್ಟತೆ ಬೇಕಾಗುತ್ತದೆ, ಅದುವೇ ಯುನಿಕೋಡ್, ಈ ಭಾಷೆ ಯುನಿಕೋಡ್ ಶಿಷ್ಟತೆಯನ್ನು ಕಡ್ಡಾಯವಾಗಿ ಪ್ರಕಟಿಸುವುದು ಮತ್ತು ಕನ್ನಡದ ಎಲ್ಲಾ ಕೆಲಸಗಳು ಹಾಗೂ ಅಂತರ್ಜಾಲ ತಾಣಗಳು ಯೂನಿಕೋಡಲ್ಲೇ ಇರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಯೂನಿಕೋಡ್ ಶಿಷ್ಠತೆ ಇರದಿರುವುದರಿಂದ ಪ್ರಪಂಚದ ಎಲ್ಲಾ ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸಿಡಲಾಗುತ್ತಿಲ್ಲ.
ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯ, ಅದಲ್ಲದೆ ಅನುವಾದ ಕ್ಷೇತ್ರದಲ್ಲೂ ಕನ್ನಡ ಮುಂದುವರಿಯಬೇಕು ಎಂದು ವಿವೇಕ್ ಆಶಯ ವ್ಯಕ್ತಪಡಿಸಿದ್ದಾರೆ. ಇದು ಕನ್ನಡದ ಬಗ್ಗೆ ಯೋಗ್ಯ ರೀತಿಯಲ್ಲಿ ಯೋಚಿಸುವವರ ಎಲ್ಲರ ಯೋಚನೆಯೂ ಆಗಿದೆ,
ನುಡಿಯೇ ನಿಜವಾದ ಸಿರಿ!
ನಿಜವಾಗಿ ಇಂದು ನುಡಿಯೇ ನಿಜವಾದ ಸಿರಿ. ಸೊಗಸಾಗಿ ನುಡಿಯಲು ಬರುವವನು ನಿಜವಾದ ಸಿರುವಂತ. ಈ ಸಿರಿತನಕ್ಕೆ ಸಾಕ್ಷಿಯಾಗುತ್ತಿದೆ ನುಡಿಸಿರಿ. ಈ ಬಾರಿ ಹತ್ತನೇ ವರ್ಷದ ಸಂಭ್ರಮಾಚರಣೆಯಲ್ಲಿ ಮಿಂದೇಳುತ್ತಿರುವ ನುಡಿಸಿರಿಗೆ ಹತ್ತನೇ ವರ್ಷದ ಸಂಭ್ರಮ. ಜೊತೆಗೆ ವಿರಾಸತ್ ಕೂಡಾ ಜೊತೆಯಾಗಿ ಹೆಜ್ಜೆ ಹಾಕುತ್ತಿದೆ. ಆದುದರಿಂದಲೇ ಇದು ವಿಶ್ವನುಡಿಸಿರಿ ವಿರಾಸತ್ ಆಗುತ್ತಿದೆ, ಗುರುವಾರದಿಂದ ಮೊದಲ್ಗೊಂಡು ಭಾನುವಾರದವರೆಗೆ ಮೂಡಬಿದಿರೆ ಕೃಷಿಮಯ, ಸಂಸ್ಕೃತಿಮಯ, ಕನ್ನಡಮಯವ.... ವಾವ್.
ವಿದ್ಯಾಗಿರಿಯ ಒಂಬತ್ತು ವೇದಿಕೆಗಳು ಒಂದಲ್ಲಾ ಒಂದು ರೀತಿಯ ಕಲರವದಿಂದ ಕಂಗೊಳಿಸುತ್ತಿದೆ. ಅಲ್ಲದೆ ಬಂದ ಅತಿಥಿಗಳನ್ನು ಸ್ವಾಗತಿಸಲು ಶಿಸ್ತಿನಿಂದ ಕೆಲಸ ಮಾಡುತ್ತಿರುವ ವಿದ್ಯಾರ್ಥಿ ಪ್ರತಿನಿಧಿಗಳು ನಿದ್ದೆ ಬಿಟ್ಟು ಸತ್ಕರಿಸುತ್ತಿದ್ದಾರೆ.
ಅಲ್ಲದೆ ಪುಸ್ತಕ ಮಳಿಗೆಗಳು ಇರುವ ಜೊತೆಗೆ ಇನ್ನೂ ವಿಶಿಷ್ಠವೆಂದರೆ ಕೆಲವರು ಕಡಿಮೆ ಬೆಲೆಗೆ ಹಳೆಯ ಪುಸ್ತಕಗಳನ್ನು ಮಾರುತ್ತಿದ್ದಾರೆ. ಜನರು ಇವುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಶಿವರಾಮ ಕಾರಂತ ಸಭಾಂಗಣದಲ್ಲಿ ನಿಂತು ದೃಷ್ಟಿ ಹರಿಸಿದರೆ ನೋಡಲು ಕಣ್ಣೇ ಸಾಲದು. ಯಾವುದನ್ನು ಹಿಡಿಯುವುದು ಯಾವುದನ್ನು ಬಿಡುವುದು? ಪರಶುರಾಮ, ನಾಟ್ಯಗಣಪತಿ, ಭಗವಾನ್ ಬಾಹುಬಲಿ, ಕೋಟಿಚೆನ್ನಯರು ಶಿಸ್ತಾಗಿ ನಿಂತು ಕಾರ್ಯಕ್ರಮಕ್ಕೆ ಮೆರುಗನ್ನು ನೀಡುತ್ತಿದ್ದಾರೆ, ಜೊತೆಗೆ ಕಲಾ ವಸ್ತು ಪ್ರದರ್ಶನ, ಫಲಪುಷ್ಪ ಪ್ರದರ್ಶನ , ತರಕಾರಿ ಪ್ರದರ್ಶನ, ಆಹಾರೋತ್ಸವ.... ಒಂದೇ ಎರಡೇ... ವಿವರಿಸಲಸದಳ.
ಯಾವ ಪತ್ರಿಕೆಗೂ ಕಮ್ಮಿ ಇಲ್ಲದ ಆಳ್ವಾಸ್ ಮಾಧ್ಯಮ.
ಆಳ್ವಾಸ್ ಕಾಲೇಜಿನ ಪತ್ರಿಕೋಧ್ಯಮ ವಿದ್ಯಾರ್ಥಿಗಳೇ ರೂಪಿಸಿದ ಆಳ್ವಾಸ್ ಮಾಧ್ಯಮ ಪತ್ರಿಕೆ ಯಾವ ಕನ್ನಡ ದಿನಪತ್ರಿಕೆಗಿಂತಲೂ ಕಡಿಮೆ ಇಲ್ಲ. ಪ್ರಬುದ್ಧ ಶೈಲಿಯ ಬರಹ, ಎಲ್ಲಾ ಸುದ್ದಿಯನ್ನು ಒಂದುಗೂಡಿಸುವುದು ಮಕ್ಕಳ ಭವಿಷ್ಯದ ಬಗ್ಗೆ ಈಗಲೇ ಅಂದಾಜಾಗುತ್ತದೆ. ಪತ್ರಿಕೆಗೆ ಬೇಕಾದ ವಿದ್ಯಾರ್ಥಿಗಳನ್ನು ಆಳ್ವಾಸ್ ರೂಪಿಸುತ್ತಿದೆ. ಜೊತೆಗೆ ಪತ್ರಕರ್ತರರನ್ನು ಆತ್ಮೀಯತೆಯಿಂದ ಬರಮಾಡುತ್ತಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳ ನಡತೆ ಎಲ್ಲರನ್ನೂ ಸೂರೆಗೊಂಡಿದೆ.
ಎಲ್ಲರೆದುರೇ ತನ್ನ ಸಂಗಡಿಗನ ತಲೆ ತುಂಡರಿಸಿದ ಭೂಪ
ಜನರಲ್ಲಿ ತಮಾಷೆಯ ಮಾಡ್ತಾ ಮಾಡ್ತಾ ಭೂಪನೊಬ್ಬ ತನ್ನ ತಲೆಯನ್ನು ತುಂಡುಮಾಡಿ ಅದನ್ನು ಕೈಯ್ಯಲ್ಲಿ ದೂರ ಮಾಡಿದ. ನಂತರ ಇದಕ್ಕೆ ಕಂಬಳಿ ಹೊದ್ದ. ಜನರು ಬೆಕ್ಕಸಬೆರಗಾಗಿ ನೋಡುವುದರಲ್ಲೇ ಬಾಕಿ. ಕೊನೆಗೆ ಜನರು ಒತ್ತಾಯಪಡಿಸಿದ್ದರಿಂದ ಆತನ ತಲೆಯನ್ನು ಮರುಜೋಡಿಸಿದ. ಗಾಬರಿಯಾಗಬೇಡಿ. ಇದು ರಾಜಸ್ತಾನದ ಅಲೆಮಾರಿ ಜಾದುಗಾರ್ ಫಾರುಖ್ ಶಾಹ ಮಾಡಿದ ಝಳಕ್. ದೂರದ ರಾಜಸ್ತಾನದಿಂದ ಬಂದು ನುಡಿಸಿರಿಗೆ ವಿಶೇಷ ಮೆರುಗನ್ನು ನೀಡಿದ್ದ ಈತ ಎಲ್ಲರ ಉಸಿರುಬಿಗಿಹಿಡಿಯುವಂತೆ ಮಾಡಲು ಸಫಲನಾಗಿದ್ದ.
ಇಷ್ಟು ಮಾತ್ರವಲ್ಲ ಜನಪದ ಶೈಲಿಯ ವೇಷ  ಧರಿಸಿದವರು, ಡೊಳ್ಳುಕುಣಿತ, ಕಂಸಾಲೆ ನೃತ್ಯ, ಪುರುಲಿಯ ವೇಷಗಳು, ಪಂಜಾಬಿನ ಭಲ್ಲೇಗಳು, ಮಣಿಪುರದ ಚೆಲುವೆಯರು. ಹೀಗೆ ಕನ್ನಡವನ್ನು ಕಟ್ಟಲು ಎಷ್ಟು ಪರಿಶ್ರಮ ಪಟ್ಟಿದ್ದಾರೆ ಆಳ್ವರು? ಇದೆಲ್ಲಾ ವಿರೋಧಿಗಳಿಗೆ ಹೇಗೆ ಅರ್ಥವಾಗಬೇಕು? ಯಾಕೆಂದರೆ ಕಟ್ಟುವುದು ಕಷ್ಟ ಬೀಳಿಸುವುದು ಸುಲಭ.
ಬರಗೂರು ಗುರ್....
ಆಳ್ವಾಸ್ ವಿಶವ ನುಡಿಸಿರಿ ಕೋಟಿಗಟ್ಟಲೆ ಸಂಪತ್ತಿನ ವೈಭವೀಕರಣ ಕಿರಿಕಿರಿ ಉಂಟುಮಾಡಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ನುಡಿಸಿರಿ ವಿರುದ್ಧ ಗುರ್ ಎಂದಿರುವುದು ಈ ಸಾರಿಯ ವಿಶ್ವನುಡಿಸಿರಿಯಲ್ಲಿ ಕಂಡುಬಂದ ಅಚ್ಚರಿದಾಯಕ ಬೆಳವಣಿಗೆ. ಅಲ್ಲದೆ ‘ಸಮಾಜ ಎಂಬ ವಿಷಯದ ಬಗ್ಗೆ ಮಾತನಾಡಬೇಕಾಗಿದ್ದ ಬರಗೂರು ಗೈರು ಹಾಜರಾಗಿ ತನ್ನ ಅಸಮಾಧಾನ ಪ್ರದರ್ಶಿಸಿದರು. ನುಡಿಸಿರಿಯ ಮೊದಲ ಅಧ್ಯಕ್ಷನಾಗಿದ್ದ ನಾನು ಅಲ್ಲಿ ನನ್ನ ವಿವರಗಳನ್ನು ಮಂಡಿಸಿದ್ದೆ. ಅದರ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿದ್ದವು. ಆದರೆ ಈ ಬಾರಿಯ ನುಡಿಸಿರಿಯ ಮೂಲ ಆಶಯಕ್ಕೆ ಧಕ್ಕೆ ಉಂಟಾಗಿದೆ . ಜನಪರ ವಿಚಾರಗಳಿಗೆ ಆಸ್ಪದ ನೀಡಲಿಲ್ಲ. ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಾಕಷ್ಟು ಸುದ್ದಿ ಮಾಡಿದ್ದರೂ ಚರ್ಚೆ ನಡೆಯಲಿಲ್ಲ.  ನನಗೆ ಆ ಪ್ರಕರಣದ ಬಗ್ಗೆ ಪ್ರಸ್ತಾಪಿಸುವ ಇರಾದೆ ಇತ್ತು ಎಂದು ನುಡಿಸಿರಿ ಬಗ್ಗೆ ಬಂಡಾಯವೆದ್ದಿದ್ದಾರೆ. ಆದರೆ  ಬರಗೂರು ನುಡಿಸಿರಿಯ ಮೊದಲ ದಿನ ಸನ್ಮಾನ ಸ್ವೀಕರಿಸಿದ್ದು ಮಾತ್ರ ವಿಶೇಷ. ಇದು ಆರಂಭವೆಂಬಂತೆ ಕಂಡುಬರುತ್ತಿದ್ದು, ನುಡಿಸರಿ ಮತ್ತು ಜನನುಡಿ ಪ್ರತಿಸ್ಪರ್ಧಿಯಾಗುವ ಸ್ಪಷ್ಟ ಲಕ್ಷಣ ಎನ್ನಲಾಗುತ್ತಿದೆ,
ಮಾತು ಮುಗಿಸುವ ಮುನ್ನ:
ಕನ್ನಡ ಸಾಹಿತ್ಯಲೋಕ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದ್ದರೂ, ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೆಪಮಾತ್ರಕ್ಕೆ ಸಿಕ್ಕಿದೆ. ಇದನ್ನು ಗಳಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕಾಗಿದೆ.

No comments:

Post a Comment