Friday, January 10, 2014

ಕೊಲೆಯಾಗಿ ಹೋದ ಸೌಜನ್ಯಾಳ ಕಣ್ಣೀರ ಕಥೆ...ಚಿಕ್ಕಂದಿನಿಂದಲೂ ಆಧ್ಯಾತ್ಮದ ಬಗಗೆ ವಿಶೇಷ ಆಸಕ್ತಿ ವಹಿಸುತ್ತಿದ್ದ ಧರ್ಮಸ್ಥಳದ ಹುಡುಗಿ ಕಾಮ ಪಿಪಾಸುಗಳ ಕೈಗೆ ಸಿಕ್ಕು ಬಲಿಯಾಗಿ ಒಂದು ವರ್ಷವಾಗ್ತಾ ಬಂದಿದೆ. ಆದರೂ ನಿಜವಾದ ಆರೋಪಗಳ ಪತ್ತೆಯಾಗಲಿಲ್ಲ ಎನ್ನುವುದು ಇನ್ನೊಂದು ನೋವಿನ ಸಂಗತಿ. ಆಕೆಯ ಬಾಳಿನ ಸಂಕ್ಷಿಪ್ತ ಕಥೆಯ ಇಣುಕುನೋಟ ಇಲ್ಲಿದೆ.
ಧರ್ಮಸ್ಥಳದಲ್ಲಿ ಮಂಜುನಾಥನ ಸನ್ನಿಧಿ ಇರುವುದರಿಂದಲೇ ವಿಶ್ವವಿಖ್ಯಾತ ಗಳಿಸಿದೆ. ಜೊತೆಗೆ ಸೌಮ್ಯವಾಗಿ ಹರಿಯುವ ನೇತ್ರಾವತಿ ನದಿ. ಗುಡ್ಡ ಬೆಟ್ಟ, ಮರಗಿಡಗಳಿಂದ ತುಂಬಿದ ಈ ಊರನ್ನು ನೋಡುವುದೇ ಒಂದು ಚಂದ. ಅಲ್ಲದೆ ಧರ್ಮಸ್ಥಳ ಮಂಜುನಾಥನ ಶಕ್ತಿ ಕೇಂದ್ರ. ಅಣ್ಣಪ್ಪ ಮತ್ತು ಪರಿವಾರ ದೈವಗಳ ಕಾರಣಿಕದ ಸ್ಥಳ. ಆದುದರಿಂದಲೇ ಇಲ್ಲಿನ ಜನರಲ್ಲಿ ಸಹಜವಾದ ಸಂಸ್ಕಾರವೊಂದು ನೆಲೆಗೂಡಿದೆ.
ಅದು ಧರ್ಮಸ್ಥಳದ ಪಾಂಗಳ ಎಂಬ ಹಳ್ಳಿ. ಅಲ್ಲಿ ಇದೆ ಬಾಬುಗೌಡರ ತುಂಬು ಕುಟುಂಬ. ಇದೇ ಕುಟುಂಬದಲ್ಲಿ ಜನಿಸಿದಳು ಸೌಜನ್ಯ. ನಾಲ್ಕು ಹೆಣ್ಣು ಮಕ್ಕಳು ಒಬ್ಬ ಗಂಡು ಮಗಳಲ್ಲಿ ಎರಡನೆಯವಳೇ ಸೌಜನ್ಯ. ಅಕ್ಟೋಬರ್ ೧೮, ೧೯೯೫ರಲ್ಲಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಗೆ ಹುಟ್ಟಿದ ಸೌಜನ್ಯಳನ್ನು ಕಂಡು ಮನೆಮಂದಿಯೆಲ್ಲಾ ಸಾಕ್ಷಾತ್ ಲಕ್ಷ್ಮೀದೇವಿಯೇ ಆಮಿಸಿದ್ದಾಳೆ ಎಂದು ಭಾವಿಸಿದ್ದರು.
ಸೌಮ್ಯವಾಗಿದ್ದ ಈ ಮುದ್ದು ಮುಖದ ಕಂದ ಸೌಜನ್ಯಾ ಬಾಲ್ಯದಿಂದಲೇ ಸಹಜವಾಗಿ ದೈವಭಕ್ತೆಯಾಗಿದ್ದಳು. ಆಧ್ಯಾತ್ಮದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಳು. ಜೊತೆಗೆ ಮಂಜುನಾಥನ ಭಕ್ತೆಯಾಗಿದ್ದಳು.
ಆಕೆಯ ಬಾಲ್ಯದ ಆಟವೆಂದರೆ ಅದು ದೇವರ ಆಟ. ತನ್ನ ಅಕ್ಕ ತಂಗಿ, ತಮ್ಮಂದಿರ ಜೊತೆ ಸೇರಿ ಕಲ್ಲುಗಳನ್ನು ಜೋಡಿಸಿ, ಅದಕ್ಕೆ ಹೂ, ಅರಶಿನ ದಾರವನ್ನು ಕಟ್ಟಿಕೊಂಡು ಇದು ಸಾಕ್ಷಾತ್ ಮಂಜುನಾಥನೇ ಎಂದು ನಂಬಿಕೊಂಡು ಆರಾಧಿಸುತ್ತಿದ್ದಳು. ಈಕೆಯ ಆಟವನ್ನು ಕಂಡು ಮನೆಮಂದಿಗೆಲ್ಲಾ ಒಂತರಾ ಪುಳಕ, ಖಷಿ. ಅಲ್ಲದೆ ಚಿಕ್ಕಂದಿನಿಂದಲೇ ಅದ್ಭುತ ಗ್ರಹಣ ಶಕ್ತಿ, ತಿಳುವಳಿಕೆ ಹೊಂದಿದ್ದ ಈಕೆಯ ದೈತ್ಯ ಪ್ರತಿಭೆಯನ್ನು ಕಂಡು ಎಲ್ಲರಿಗೂ ಅಚ್ಚರಿಯೋ ಅಚ್ಚರಿ. ಮುಂದೊಂದು ದಿನ ಈಕೆ ಏನಾದರೊಂದು ಸಾಧನೆ ಮಾಡಿಯೇ ಮಾಡುತ್ತಾಳೆ ಎಂದು ತಾಯಿ ಕುಸುಮಾವತಿ ನಂಬಿಕೊಂಡಿದ್ದರು.
ಆಗ ಸೌಜನ್ಯಳಿಗೆ ಮೂರು ವರ್ಷ. ಆಗ ಅವಳನ್ನು ಅಂಗನವಾಡಿಗೆ ಸೇರಿಸಲಾಯ್ತು. ಆಕೆಯ ಬುದ್ಧಿ ಪಕ್ವವಾಗುತ್ತಿದ್ದಂತೆ ದೇವರ ಮೇಲೆ ಇನ್ನಷ್ಟು ಆಸಕ್ತಿವಹಿಸಿಕೊಂಡಳು. ಮನೆಗೆ ಬಂದು ಅಜ್ಜ ಅಜ್ಜಿಯವರಲ್ಲಿ ಮಂಜುನಾಥ ಸ್ವಾಮಿಯ ಕಥೆ ಹೇಳುವಂತೆ ಪೀಡಿಸುತ್ತಿದ್ದಳು. ಈ ಕಥೆಯನ್ನು ಅಂಗನವಾಡಿಯ ಗೆಳತಿಯರೊಂದಿಗೆ ಹೇಳುವುದು ಈಕೆಗೆ ಬಲು ಇಷ್ಟ. ಪ್ರಾಣಿ ಪಕ್ಷಿಗಳಲ್ಲೂ ಆಸಕ್ತಿ ವಹಿಸಿಕೊಂಡ ಸೌಜನ್ಯಾ ದಾರಿಯಲ್ಲಿ ತಿರುಗಾಡುತ್ತಿದ್ದ ಮುದ್ದು ಪ್ರಾಣಿಗಳನ್ನು ಅಪ್ಪಿ ಮುದ್ದಾಡಿ ಏನಾದರೊಂದು ತಿಂಡಿ ಹಾಕಿ ಕಳಿಸುತ್ತಿದ್ದಳು.
ಒಂದು ದಿನ ಸೌಜನ್ಯಳಿಗೆ ಏನೆನಿಸಿತೋ ಏನೋ? ಮಣ್ಣಿನ ಗೊಂಬೆಯೊಂದನ್ನು ತಯಾರಿಸಿ ಅದಕ್ಕೆ ಬಟ್ಟೆ ಬರೆಗಳನ್ನು ತೊಡಿಸಿ ಶೃಂಗರಿಸತೊಡಗಿದಳು. ಆಕೆಯ ಪ್ರಕಾರ ಅದು ಮಂಜುನಾಥ ಸ್ವಾಮಿಯಂತೆ. ಅದನ್ನೇ ಪೂಜಿಸಿ ಕೃತಾರ್ಥಳಾಗುತಿದ್ದಳು.
ನಂತರ ಸೌಜನ್ಯಳಿಗೆ ಆರು ತುಂಬಿತು. ಅಮ್ಮ ಅವಳನ್ನು ಧರ್ಮಸ್ಥಳದ ಪ್ರಾಥಮಿಕ ಶಾಲೆಗೆ ಕಳುಹಿಸಿದರು. ಆಕೆ ಎಂದಿಗೂ ಶಾಲೆಗೆ ಹೋಗಲು ತಕರಾರು ಎತ್ತಿದವಳಲ್ಲ. ವಯಸ್ಸಿಗೆ ಮೀರಿದ ಬುದ್ಧಿ ಶಕ್ತಿಯಿಂದಲೇ ಪ್ರಾಥಮಿಕ ಶಿಕ್ಷಣದಲ್ಲೂ ಸೈ ಎನಿಸಿದಳು. ಶಾಲೆಕಳ್ಳಿಯಾಗದೆ, ತನ್ನ ಪುಸ್ತಕವನ್ನು ತಾನೇ ಹೊಂದಿಸಿ, ಅತ್ತ ಅಮ್ಮನಿಗೂ ಸಹಾಯ ಮಾಡಿಕೊಂಡು ಹೋಗುತ್ತಿದ್ದಳು. ಸಹಪಾಠಿಗಳಿಗೂ ಆಕೆಯ ಮೇಲೆ ಶಿಕ್ಷಕರಿಗೂ ಅಚ್ಚುಮೆಚ್ಚು.
ನಂತರ ಸೌಜನ್ಯಾ ಎಸ್‌ಡಿಎಂನಲ್ಲಿ ಹೈಸ್ಕೂಲು ಶಿಕ್ಷಣಕ್ಕೆ ಅಡಿ ಇಟ್ಟಳು. ಸೌಜನ್ಯಾ ಎಂದೂ ಜಾಲಿ ಮಾಡಿದ ಹುಡುಗಿಯಲ್ಲ. ದೇವರ ಧ್ಯಾನ, ಭಜನೆ ಮಾಡಿಕೊಂಡು ಮಂಜುನಾಥನಲ್ಲಿ ಐಕ್ಯಳಾಗುತ್ತಿದ್ದಳು. ತಾನಾಯಿತು ತನ್ನ ಶಿಕ್ಷಣವಾಯ್ತು ಅಷ್ಟೆ.
ಆಕೆಯ ತಾತ ಬಾಬುಗೌಡ ಆಕೆಯ ಗುಣದ ಬಗ್ಗೆ ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರಲ್ಲಿ ಒಂದು ಜೀಪಿತ್ತು. ಸೌಜನ್ಯ ಹೋಗುವ ದಾರಿಯಲ್ಲೇ ಇವರದ್ದೂ ಪಯಣ. ಒಂದು ದಿನ ಇದ್ದಕ್ಕಿದ್ದಂತೆ ತನ್ನ ಜೀಪನ್ನು ಹತ್ತಿರದಲ್ಲೇ ನಿಲ್ಲಿಸಿದರೂ ತಲೆ ಎತ್ತಿ ನೋಡಲಿಲ್ಲ ಸೌಜನ್ಯ. ಕೊನೆಗೆ ತಾತನೇ ಬುದ್ಧಿ ಹೇಳಿ ನಾನು ನಿನ್ನ ಹತ್ತಿರಲ್ಲೇ ಜೀಪು ನಿಲ್ಲಿಸಿದರೂ ಯಾಕೆ ತಲೆ ಎತ್ತಿ ನೋಡಬಾರದೇ? ಹೀಗೆ ಮಾಡುವುದು ಅಪಾಯ ಎಂದಾಗ, ನನಗೆ ಮಂಜುನಾಥ ಸ್ವಾಮಿಯ ಕೃಪೆ ಇದೆ ನಾನ್ಯಾಕೆ ಹೆದರಬೇಕು ಅಜ್ಜಾ ಎಂದು ಪ್ರಶ್ನಿಸಿದ್ದಳು. ಅವಳ ಧೈರ್ಯವನ್ನು ಕಂಡು ಈಗಲೂ ಕಣ್ಣೀರಾಗುತ್ತಾರೆ ಬಾಬುಗೌಡ.
ಹತ್ತನೇ ತರಗತಿಯಲ್ಲಿ ಬರೋಬ್ಬರಿ ೭೫ ಶೇ. ಅಂಕದೊಂದಿಗೆ ಉತ್ತೀರ್ಣಳಾದಳು. ನಂತರ ಈಕೆಯನ್ನು ಎಸ್‌ಡಿಎಂ ಕಾಲೇಜ್‌ಗೆ ಸೇರಿಸಲಾಯ್ತು. ಕಾಲೇಜ್‌ನಲ್ಲಿ ಇದ್ದಾಗಲೂ ಆಕೆ ಜಾಲಿ ಮಾಡುತ್ತಿರಲಿಲ್ಲ. ತಾನಾಯ್ತು ತನ್ನ ಕೆಲಸವಾಯ್ತು. ಯಾರೊಂದಿಗೂ ಜಗಳ ಕಾಯ್ತಿರಲಿಲ್ಲ. ಕಡಿಮೆ ಮಾತು, ಸರಳ ವ್ಯಕ್ತಿತ್ವ. ಮೊಬೈಲ್ ಅಂದ್ರೆ ಅಷ್ಟೇ ದೂರ. ಈ ಬಗ್ಗೆ ಆಕೆಯ ಗೆಳತಿ ವರ್ಷಾ ಈಗಲೂ ನೆನಪಿಸಿಕೊಳ್ಳುತ್ತಾಳೆ.
ಈ ಸಂದರ್ಭದಲ್ಲಿ ಆಕೆ ಮಾವನ ವಿಠ್ಠಲ ಗೌಡ ಅವರ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಳ್ಳಲು ಆರಂಭಿಸಿದ್ದಳು. ಜೊತೆಗೆ ತೋಟದಲ್ಲಿ ಅಡಿಕೆ ಸುಲಿಯುವುದು, ತೋಟಕ್ಕೆ ಗೊಬ್ಬರ ಹೊರುವುದು. ಶುಕ್ರವಾರ ದಿವಸ ದೇವರಿಗೆ ಹೂವಿನ ಮಾಲೆಯನ್ನು ಅರ್ಪಿಸದೆ ಕಾಲೇಜ್‌ಗೆ ಹೋಗುತ್ತಿರಲಿಲ್ಲ. ಇಂಜಿನಿಯರ್ ಆಗಬೇಕೆಂದು ಕನಸು ಕಂಡಿದ್ದಳು.
ನೆನಪಿನಂಗಳಕ್ಕೆ ಇಳಿದ ಮಾವ ವಿಠ್ಠಲ ಗೌಡ:
ಸೌಜನ್ಯಾಳ ಬಗ್ಗೆ ನೆನಪಿನಂಗಳಕ್ಕೆ ಇಳಿದ ಆಕೆಯ ಮಾವ ವಿಠ್ಠಲ ಗೌಡ, ಮನೆಯಲ್ಲೆ ಆಕೆಯೇ ಟೀಚರ್. ರಜೆಯ ದಿವಸದಲ್ಲಿ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ನನ್ನ ಹೋಟೆಲ್‌ಗೆ ಕೆಲಸ ಮಾಡಲು ಬರುತ್ತಿದ್ದಳು. ಅಡಿಗೆಯಿಂದ ಹಿಡಿದು ಟೇಬಲ್ ಒರಸುವುದು, ಪಾತ್ರೆ ತೊಳೆಯುವುದು, ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತು ನನಗೆ ಸಹಾಯ ಮಾಡುತ್ತಿದ್ದಳು. ನಾವಾ ಆಕೆಗೆ ನೂರೋ, ಇನ್ನೂರೋ ಕೊಡುತ್ತಿದ್ದೆವು. ಅದನ್ನು ಆಕೆ ತನ್ನ ಬ್ಯಾಂಕ್‌ನ ಉಳಿತಾಯ ಖಾತೆಗೆ ಹಾಕುತ್ತಿದ್ದಳು. ಎಂಜಿನಿಯರ್ ಮುಗಿಸಿ ತಾಯಿಗೊಂದು ಕೈನಟಿಕ್ ಸ್ಕೂಟರ್ ತೆಗೆಸಿಕೊಡಬೇಕೆಂದು ಕನಸು ಕಂಡಿದ್ದಳು. ಆ ಸಂದರ್ಭದಲ್ಲಿ ಆಕೆಯ ಅಕ್ಕ ಸೌಮ್ಯಳಿಗೆ ಮದುವೆ ಫಿಕ್ಸ್ ಆಗಿತ್ತು. ಈ ಸಂದರ್ಭದಲ್ಲಿ ೨೦೦೦ ರೂ. ಹಣವನ್ನು ಕೂಡಿಟ್ಟುಕೊಂಡದ್ದ ಸೌಜನ್ಯಾ ತನನ ಅಕ್ಕನ ಮದುವೆಗೆ ನನ್ನ ಬಟ್ಟೆಯನ್ನು ನಾನೇ ತೆಗೆದುಕೊಳ್ಳುತ್ತೇನೆ. ನೀವು ಅದಕ್ಕಾಗಿ ಖರ್ಚು ಮಾಡುವುದು ಬೇಡ ಎಂದು ಹೇಳಿದ್ದಳು ಎಂದು ಆಕೆಯ ಮಾವ ಎಂದು ನೆನಪಿಸಿಕೊಳ್ಳುತ್ತಾರೆ.
ಅದರಂತೆ ಆಕೆಯ ಅಕ್ಕನ ಮದುವೆಗೆಂದು ಆಕೆಯೇ ಕೊಂಡಿದ್ದ ವಾಚ್, ಬಳೆ, ಚೂಡಿದಾರ್ ಈಗಲೂ ಮನೆಯಲ್ಲಿ ಭದ್ರವಾಗಿದೆ. ಆಕೆಯ ಪುಸ್ತಕ, ಬ್ಯಾಗ್ ಕೊಡೆಯನ್ನು ಮನೆಯವರು ಇಂದಿಗೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ.
ಸೌಜನ್ಯಾಳ ಪಾಲಿಗೆ ಕರಾಳ ಅಧ್ಯಾಯ ಬರೆದ ಅಕ್ಟೋಬರ್ ೯, ೨೦೧೨:
ಅಂದು ಅಕ್ಟೋಬರ್ ೯, ೨೦೧೨ನೇ ಇಸ್ವಿ. ಎಂದಿನಂತೆ ತನ್ನ ಅಮ್ಮ ಕುಸುಮಾವತಿಯವರನ್ನು ಕರೆದು, ‘ಅಮ್ಮಾ ಕಾಲೇಜ್‌ಗೆ ಹೋಗಿ ಮಧ್ಯಾಹ್ನ ೧.೩೦ಗೆ ಮನೆಗೆ ಬರುತ್ತೇನೆ. ಮನೆಯಲ್ಲಿ ಎಲ್ಲರೂ ಒಟ್ಟಾಗಿ ಊಟ ಮಾಡೋಣ ಎಂದು ಹೇಳಿದ್ದಳು. ಆಗ ಅಮ್ಮ ಆಕೆಯ ಮುಖವನ್ನೂ ನೋಡದೆ ಮನೆಯೊಳಗಿನಿಂದಲೇ ಹೂಂಗುಟ್ಟಿದ್ದರು. ಆದರೆ ಆಕೆ ಮರುದಿನ ಆಗಮಿಸಿದ್ದು ಹೆಣದ ರೂಪದಲ್ಲಿಯೇ.
ತನ್ನಿಬ್ಬರು ಗೆಳತಿಯರೊಂದಿಗೆ ಉಜಿರೆಯ ಬಸ್ ಹತ್ತಿ ಕಾಲೇಜ್‌ಗೆ ತೆರಳಿದ್ದಳು. ನಂತರ ಮಧ್ಯಾಹ್ನ ಉಜಿರೆಯಿಂದ ಬಸ್ ಹತ್ತಿ ಶಾಂತಿವನ ಬಸ್‌ನಿಲ್ದಾಣದಲ್ಲಿ ಇಳಿದಿದ್ದಾಳೆ. ಇದನ್ನು ಅಲ್ಲಿನ ಟೀ ಅಂಗಡಿಯವ ನೋಡಿದ್ದಾನೆ. ಪಾಂಗಳಕ್ಕೆ ಹೋಗಬೇಕಾದರೆ ಅಲ್ಲೊಂದು ಕಾಲುದಾರಿಯಿದೆ. ನಿತ್ಯವೂ ಅಲ್ಲಿಂದಲೇ ಮನೆಗೆ ಬರುತ್ತಿದ್ದ ಸೌಜನ್ಯ ಅಂದು ಮನೆಗೆ ಬರಲೇ ಇಲ್ಲ. ಹೀಗೆ ಮನೆಯವರು ಆರು ಗಂಟೆಯವರೆಗೆ ಕಾದರು. ನಂತರ ಮನೆಯವರೆಲ್ಲಾ ಸೇರಿ ಹುಡುಕಾಡಿದರೂ ಸೌಜನ್ಯ ಸಿಗಲಿಲ್ಲ. ತಕ್ಷಣ ಪಕ್ಕದ ಹೊರಠಾಣೆ ಮತ್ತು ಬೆಳ್ತಂಗಡಿ ಠಾಣೆಗೆ ದೂರಿಟ್ಟರು. ಪೊಲೀಸರು ತಕ್ಷಣ ಆಕೆಯ ಹುಡುಕಾಟದಲ್ಲಿ ತೊಡಗಿದರು.
ಸ್ವಲ್ಪ ಹೊತ್ತಿನ ಬಳಿಕ ಶಾಂತಿವನದಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಸೌಜನ್ಯಾಳ ಅರೆನಗ್ನ ದೇಹ ಪತ್ತೆಯಾಗಿದೆ ಎಂದು ಸುದ್ದಿ ಮನೆಯವರಿಗೆ ಬಂದಿದ್ದೇ ತಡ. ಎಲ್ಲರೂ ಕಣ್ಣೀರಲ್ಲಿ ಕೈತೊಳೆದುಕೊಂಡರು. ಆಕೆಯ ಅರೆಬರೆ ಉಡುಪು, ನಗ್ನಾವಸ್ಥೆಯ ಸ್ಥಿಯಲ್ಲಿನ ಶವವನನು ಕಂಡು ಊರಿಗೆ ಊರೇ ಕಣ್ಣೀರಿಟ್ಟಿತು.
ಮರುದಿನ ಅ.೧೦ಕ್ಕೆ ಮನೆಗೆ ಶವ ಬಂದಾಗ ತಾಯಿ ಕುಸುಮಾವತಿ ಭೂಮಿಗೆ ಇಳಿದೇ ಹೋಗಿದ್ದರು.
ಆದರೆ ಮರುದಿನ ಶಾಂತಿವನದ ಪಕ್ಕದಲ್ಲೇ ಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದ ವ್ಯಕ್ತಿಯೋರ್ವನ ಪತ್ತೆಯಾಯ್ತು. ಆತನ ಹೆಸರು ಸಂತೋಷ್. ಆತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಆದರೆ ಆತ ಅರೆಹುಚ್ಚನಾಗಿದ್ದ. ಆತನೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಕಥೆ ಕಟ್ಟಲಾರಂಭಿಸಿದರು. ನಿಜವಾದ ಆರೋಪಿ ಯಾರೆಂದು ಇದುವರೆಗೂ ಪತ್ತೆಯಾಗಲಿಲ್ಲ. ಆಕೆಯ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದ್ದು ಸಿಬಿಐ ತನಿಖೆಗೆ ಒತ್ತಾಯವೊಂದು ಕೇಳಿಬಂದಿದೆ.


No comments:

Post a Comment