Friday, August 10, 2018

ಸಾವರ್ಕರ್ 21 ದಿನಗಳ ಕಾಲ ಉಪವಾಸ ಹೂಡಿ ದೇಹತ್ಯಾಗ ಮಾಡಿದ್ದು ಯಾಕೆ?

ವಿನಾಯಕ ದಾಮೋದರ ಸಾವರ್ಕರ್.... ಇಡೀ ಇಂಗ್ಲೆಂಡ್ ಸಾಮ್ರಾಜ್ಯವನ್ನೇ ಗಡಗಡ ನಡುಗುವಂತೆ ಮಾಡಿದ,  ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಬದುಕನ್ನು, ತಮ್ಮ ಇಡೀ ಕುಟುಂಬವನ್ನೇ ಸಮರ್ಪಿಸಿದ, ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತ ಸಾವರ್ಕರ್ ಅವರನ್ನು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿತ್ತು ಗೊತ್ತಾ? ಛೇ ಇಂತಹಾ ಕಷ್ಟ ಯಾರಿಗೂ ಬರಬಾರದಿತ್ತು... ಕೊನೆಗೆ 21 ದಿನಗಳ ಕಾಲ ಉಪವಾಸ ಮಾಡಿಕೊಂಡು ದೇಹವನ್ನೇ ತ್ಯಾಗ ಮಾಡಿದರು ಸಾವರ್ಕರ್. 

ಛೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಸೇನಾನಿಯನ್ನು  ನಮ್ಮಿಂದ ಉಳಿಸಲು ಸಾಧ್ಯವಾಗಲಿಲ್ಲವಲ್ಲ!

ಅಘಾತಗಳ ಮೇಲೆ ಅಘಾತ...!

ವಿದೇಶಕ್ಕೆ ತೆರಳಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಸಾವರ್ಕರ್ ನಿಜವಾಗಿಯೂ ಅಪ್ರತಿಮ ದೇಶಭಕ್ತ. ವಿದೇಶಕ್ಕೆ ತೆರಳಿ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿ ದೇಶಭಕ್ತಿ ಪ್ರದರ್ಶಿಸಿದ್ದಕ್ಕಾಗಿ ಇಂಗ್ಲೆಂಡ್ ಅವರಿಗೆ ಇಡೀ ಜಗತ್ತಲ್ಲೇ ಯಾರಿಗೂ ಕೊಡದ ಭೀಕರ ಶಿಕ್ಷೆಯನ್ನು ನೀಡಿತ್ತು.  ಅದೇ 50 ವರ್ಷಗಳ ಕರಿನೀರಿನ ಶಿಕ್ಷೆ.  ಕರಿನೀರಿನ ಶಿಕ್ಷೆ ಎಂದರೆ ಅದನ್ನು ಸಾವಿನ ಮನೆ ಎಂದೇ ಕರೆಯಲಾಗುತ್ತಿತ್ತು. ಶಿಕ್ಷೆಯ ಹೆಸರು ಕೇಳಿದರೇನೇ ಹೃದಯಾಘಾತಕ್ಕೊಳಗಾಗಬೇಕು...! ಹೊರಗಿನ ಯಾವ ಸಂಪರ್ಕವೂ ಇಲ್ಲದೆ ನಾಲ್ಕು ಗೋಡೆಗಳ ಕತ್ತಲ ಕೋಣೆಯಲ್ಲಿ ಏಕಾಂಗಿಯಾಗಿರುವ ಎದೆಬಿರಿಯುವ ಶಿಕ್ಷೆಯನ್ನು ನೀಡಿದರೂ ವಿಚಲಿತರಾಗದ ಸಾವರ್ಕರ್ ಜೋರಾಗಿ ಗಹಗಹಿಸಿ ನಕ್ಕಿದ್ದರಂತೆ... ಯಾಕೆ ಗೊತ್ತಾ? 50 ವರ್ಷಗಳ ಕಾಲ ನಿಮ್ಮ ಸರಕಾರ ಇದ್ದರೆ ತಾನೆ? ಸಾವರ್ಕರ್ಗೆ ದೇಶ ಶೀಘ್ರ ಸ್ವಾತಂತ್ರ್ಯಗೊಂಡು ಸ್ವತಂತ್ರ್ಯ ಭಾರತದಲ್ಲಿ ನೆಮ್ಮದಿಯಿಂದ ಇರಬಹುದೆಂದು ಎನಿಸಿದ್ದರು. ಆದರೆ ಸ್ವಾತಂತ್ರ್ಯಗೊಂಡ ಬಳಿಕ ನೆಹರೂ ಸರಕಾರ ಅವರನ್ನು ಯಾವ ರೀತಿ ನಡೆಸಿತ್ತು ಅಂದರೆ ಖಂಡಿತಾ ನಿಮ್ಮ ಕಣ್ಣಲ್ಲಿ ಧಾರಾಕಾರ ನೀರು ಸುರಿಯುವುದು ಖಂಡಿತಾ!!!

ಇಟಲಿ ರಾಷ್ಟ್ರಭಕ್ತ ಮ್ಯಾಝಿನಿಯನ್ನು ಆದರ್ಶನಾಯಕನನ್ನಾಗಿ ಇಟ್ಟುಕೊಂಡಿದ್ದ ಸಾವರ್ಕರ್ ಮ್ಯಾಝಿನಿ ಚರಿತ್ರೆಯನ್ನು ವೀರಾವೇಶದ ನುಡಿಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರೇಪಣೆ ನೀಡುವ ಶೈಲಿಯಲ್ಲಿ ಬರೆದು ಭಾರತಕ್ಕೆ ಕಳುಹಿಸಿದ್ದರು.  ಸಾವರ್ಕರ್ರ ಬರಹದ ಶೈಲಿ ಇಡೀ ದೇಶದಲ್ಲೇ ಕ್ರಾಂತಿಗೆ ಪ್ರೇರಣೆ ನೀಡಬಹುದೆಂದು ಬೆಚ್ಚಿದ ಇಂಗ್ಲೆಂಡ್ ಸರಕಾರ ಅವರು ಬರೆದ `ಮ್ಯಾಝಿನಿ' ಪುಸ್ತಕ ಮುಟ್ಟುಗೋಲು ಹಾಕಲ್ಪಟ್ಟಿತು.

ಛಲ ಬಿಡದ ಸಾವರ್ಕರ್ `ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ -1857' ಎಂಬ ಕೃತಿಯನ್ನು ಬರೆದರು.  ಈ ಪುಸ್ತಕವನ್ನು ಅವರ ಅಣ್ಣ ಗಣೇಶ(ಬಾಬಾ) ಸಾವರ್ಕರರು ಪ್ರಕಟಿಸಲು ಸಾಕಷ್ಟು ಯತ್ನಿಸಿದರು. ಆದರೆ ಮಾಹಿತಿ ಅರಿತ ಇಂಗ್ಲೆಂಡ್ ಆ ಪುಸ್ತಕವನ್ನು ಮುಟ್ಟುಗೋಲು ಹಾಕಿಸಲು  ಇಂಗ್ಲೆಂಡ್ ಮುದ್ರಾಣಯದ ಮೇಲೆ ನಿರಂತರವಾಗಿ ದಾಳಿ ನಡೆಸಿತು. ಆದರೆ ಎಷ್ಟು ದಾಳಿ ನಡೆಸಿದರೂ ಪುಸ್ತಕದ ಹಸ್ತಪ್ರತಿ ಸಿಗಲಿಲ್ಲ. ಕೊನೆಗೆ ಇದನ್ನು ಫ್ರಾನ್ಸ್‍ಗೆ ರವಾನಿಸಲಾಯಿತು. ಭಾರತೀಯ ಭಾಷೆಯಲ್ಲಿರುವ ಪುಸ್ತಕ ಫ್ರಾನ್ಸ್‍ನಲ್ಲಿ ಮುದ್ರಣವಾಗದ ಕಾರಣ ಮತ್ತೆ ಆ ಕೃತಿಯನ್ನು ಇಂಗ್ಲೀಷ್‍ಗೆ ತರ್ಜುಮೆ ಮಾಡಿ ಮುದ್ರಿಸಲಾಯಿತು. ಇದನ್ನು ಗ್ರಹಿಸಿದ ಇಂಗ್ಲೆಂಡ್ ಪುಸ್ತಕವನ್ನು ಮುಟ್ಟುಗೋಲು ಹಾಕಿತು. ಆದರೆ ಈ ಗ್ರಂಥ ಇಡೀ ದೇಶದ ಸ್ವಾತಂತ್ರ್ಯ ಚಳುವಳಿಯ ದಿಕ್ಕನ್ನೇ ಬದಲಿಸಿತು. ಭಗತ್ ಸಿಂಗ್, ಅಜಾದ್, ಸುಭಾಷ್‍ಚಂದ್ರ ಬೋಸ್‍ನಂತಹಾ ಸಾವಿರಾರು ಕ್ರಾಂತಿಕಾರರು ಹುಟ್ಟಿಕೊಂಡರು. ಇದಕ್ಕಾಗಿ ಸಾವರ್ಕರ್ರನ್ನು ಬಂಧಿಸಿ ರಾಜದ್ರೋಹದ ಆಪಾದನೆ ಹೊರಿಸಿ ಅಜನ್ಮ ಕಾರಾವಾಸದ ಶಿಕ್ಷೆ ವಿಧಿಸಲ್ಪಟ್ಟಿತು. 

ಸಾವರ್ಕರ್ಗೆ ಚಿಕ್ಕಂದಿನಿಂದಲೇ ಅನೇಕ ಕಷ್ಟಗಳನ್ನು ಅನುಭವಿಸಿದ್ದರು. ಚಿಕ್ಕಂದಿನಲ್ಲಿಯೇ ಅವರು ತಾಯಿಯನ್ನು ಕಳೆದುಕೊಂಡಿದ್ದರು. ಅವರ ಚಿಕ್ಕಮಗ ಸಿಡುಬಿಗೆ ಬಲಿಯಾದ. ಅವರ ಹಿರಿಯ ಸಹೋದರ ಗಣೇಶ್‍ಪಂತ್ (ಬಾಬಾರಾವ್) ಗಡೀಪಾರು ಶಿಕ್ಷೆಗೆ ಒಳಗಾದರು. ಕಿರಿಯ ಸಹೋದರ ನಾರಾಯಣರಾವ್ ಅವರನ್ನು ಬಂಧಿಸಲಾಯಿತು. ಇಂಗ್ಲೆಂಡ್ ಸರಕಾರ ಅವರ ಮನೆ ಹಾಗೂ ಆಸ್ತಿಯನ್ನು ಮುಟ್ಟುಗೋಲು ಹಾಕಿತು.  ಅವರ ಶಿಷ್ಯ ಮದನ್‍ಲಾಲ್ ಧಿಂಗ್ರಾರನ್ನು ಲಂಡನ್‍ನಲ್ಲಿ ಗಲ್ಲಿಗೇರಿಸಲಾಯಿತು. ಸಾವರ್ಕರ್ ಬ್ಯಾರಿಸ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಭಾರತಕ್ಕೆ ಬರುವ ಯೋಚನೆಯಲ್ಲಿದ್ದಾಗ ಅವರನ್ನು ರಾಜದ್ರೋಹ, ಒಳಸಂಚು ಮತು ಕ್ರಾಂತೀಯ ಪ್ರಚೋದನೆಗಾಗಿ 1910 ಮಾರ್ಚ್ 13ರಂದು ಬಂಧಿಸಲಾಯಿತು! ಅವರನ್ನು ಬ್ರಿಕ್ಸ್‍ಟನ್ ಕಾರಾಗೃಹದಲ್ಲಿ ಇರಿಸಿದ ನಂತರ ಭಾರತಕ್ಕೆ ಕಳುಹಿಸುವ ಪ್ರಯತ್ನ ನಡೆಯಿತು. ಹೀಗೆ ಆಘಾತಗಳ ಸರಮಾಲೆ ಸಾವರ್ಕರ್ರನ್ನು ಸುತ್ತಿಕೊಂಡಿತು!

ಸಾವರ್ಕರ್ರನ್ನು ಭಾರತಕ್ಕೆ ಹಡಗಿನಲ್ಲಿ ಕಳುಹಿಸಲು ನಿರ್ಧರಿಸಲಾಯಿತು. ಹಡಗು ಫ್ರಾನ್ಸ್‍ನ ಬಂದರು ಮರ್ಸೈಲ್ಸ್  ತಲುಪಿದಾಗ ಲಂಗರು ಹಾಕಬೇಕಾಯಿತು. ಅಲ್ಲಿಂದ ಹೇಗಾದರೂ ಪಾರಾಗುವ ಸಾಹಸಕ್ಕೆ ಸಾವರ್ಕರ್ ಅನುವಾದರು. ಸಾವರ್ಕರ್ ತಪ್ಪಿಸದಂತೆ ಕಾವಲುಗಾರರು ತೀವ್ರ ನಿಗಾ ವಹಿಸಿದ್ದರು. ಅಲ್ಲಿಂದ ತಪ್ಪಿಸುವಂತೆಯೇ ಇರಲಿಲ್ಲ. ಅದಕ್ಕಾಗಿ ಉಪಾಯ ಮಾಡಿದ ದಾಮೋದರ್, ಕಾವಲುಗಾರರಲ್ಲಿ ತನಗೆ ಶೌಚಕ್ಕೆ ಹೋಗಬೇಕೆಂದು ತಿಳಿಸಿದರು. ಶೌಚಾಲಯದ ಬಾಗಿಲು ಹಾಕಿದ ಸಾವರ್ಕರ್ ಚಿಲಕ ಭದ್ರಪಡಿಸಿಕೊಂಡು ಕಿಟಕಿಯನ್ನು ಅಂಗಿಯಲ್ಲಿ ಮುಚ್ಚಿಕೊಂಡು ಹಡಗಿನ ಕಿಂಡಿಯಿಂದ ಸಮುದ್ರಕ್ಕೆ ಧುಮುಕಿದರು. ಸಾವರ್ಕರ್ ಇನ್ನೂ ಶೌಚಾಲಯದಿಂದ ಹೊರಬಾರದಿರುವುದನ್ನು ಗಮನಿಸಿ ದಿಗಿಲುಬಿದ್ದ ಕಾವಲುಗಾರರು ಸುದ್ದಿಮುಟ್ಟಿಸಿದರು. ಹತ್ತಾರು ಸಣ್ಣ ದೋಣಿಗಳ ಮೂಲಕ ಸಾವರ್ಕರ್ ಅವರ ಬೆನ್ನುಬಿದ್ದರು. ಫ್ರಾನ್ಸ್ ನೆಲದಲ್ಲಿ ತನ್ನನ್ನು ಬಂಧಿಸುವ ಅಧಿಕಾರ ತಮಗಿಲ್ಲ ಎಂದೂ ಕೇಳದೆ ಮತ್ತೆ ಸೆರೆಹಿಡಿದು ಹಡಗಿನಲ್ಲಿ ಮರಳಿ ತರಲಾಯಿತು. 

ಮುಂದೆ ಅವರಿಗೆ ಐವತ್ತು ವರ್ಷಗಳ ಕಾಲ  ಅಂಡಮಾನಿನ ಕಾರಾಗೃಹದಲ್ಲಿ ಕರಿನೀರಿನ ಶಿಕ್ಷೆಗೆ ಒಳಗಾದರು. ಬೆಳಗ್ಗಿನಿಂದ ಸಂಜೆ ತನಕ ಎಣ್ಣೆ ಹಿಂಡುವ ಗಾಣವನ್ನು ಎತ್ತಿನಂತೆ ದೂಡುವುದು, ಹಗ್ಗ ಹೊಸೆಯುವುದು, ಸರಿಯಾದ ಆಹಾರವಿಲ್ಲದೆ ಕ್ಷಯರೋಗ ಬಡಿದವರಂತೆ ಬಿಡುಗಡೆಯ ದಾರಿಯಿಲ್ಲದೆ, ಮಾತನಾಡಲು ಮನುಷ್ಯ ಸಹವಾಸವಿಲ್ಲದೆ, ನೊಣ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಅನೇಕ ಕಠಿಣ ಶಿಕ್ಷೆಗಳನ್ನು ಅನುಭವಿಸಿದರು. ಕೆಲಸ ಮಾಡಲಾಗದಿದ್ದರೆ ಬೆತ್ತದ ಏಟುಗಳನ್ನು ತಿನ್ನಬೇಕಾಗಿತ್ತು. ಕೆಲಸವಾದ ಮೇಲೆ ಸಂಕೋಲೆಯ ಮುಖಾಂತರ ಬಂಧಿಸಲಾಗುತ್ತಿತ್ತು. 

ಅಂತೂ ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಆದರೆ ಅವರ ವಿಧಿಬರಹ ಚೆನ್ನಾಗಿರಲಿಲ್ಲವೇನೋ? ಸ್ವತಂತ್ರ್ಯ ಭಾರತದಲ್ಲಿ ನೆಮ್ಮದಿಯಿಂದ ಇರಬೇಕಾಗಿದ್ದ ಅದೇ ಸಾವರ್ಕರ್ ಮತ್ತೆ ಬಂಧನಕ್ಕೊಳಗಾದರು. ಪಾಪ ತನ್ನ ಜೀವನ ಪೂರ್ತಿ ಜೈಲಿನಲ್ಲೇ ಕೊಳೆದರು ಸಾವರ್ಕರ್.  ಅಂಡಮಾನ್‍ನಿಂದ ಬಿಡುಗಡೆಗೊಂಡರೂ ಮತ್ತೆ ಅವರ ಮೇಲೆ ಸುಳ್ಳಾರೋಪ ಹೊರಿಸಲಾಯಿತು. ಅದೇ ಗಾಂಧಿ ಹತ್ಯೆ...!

ಗಾಂಧಿ ಹತ್ಯೆಯಾದ ಬಳಿಕ ಒಂದೇ ವಾರದ ಅಂತರದಲ್ಲಿ ಸಾವರ್ಕರ್ರನ್ನು ಬಂಧಿಸಲಾಯಿತು.  ಅವರ ಇಡೀ ಮನೆಯನ್ನು ಜಾಲಾಡಿ 143 ಕಡತಗಳನ್ನು, ಸಾವಿರಾರು ಪತ್ರಗಳನ್ನು ಕಾಂಗ್ರೆಸ್ ಸರಕಾರ ವಶಕ್ಕೆ ತೆಗೆದುಕೊಂಡಿತು. 26 ವರ್ಷ ಜೈಲಲ್ಲಿ ಕಳೆದು ಅನಾರೋಗ್ಯಪೀಡಿತನಾಗಿದ್ದ ಸಾವರ್ಕರ್ಗೆ ಮತ್ತೆಲೊಂದು ವರ್ಷ ಜೈಲು ಶಿಕ್ಷೆ ನೀಡಿ 1949ರಂದು ನಿರ್ದೋಶಿಯಾಗಿ ಸಾಬೀತಾಗಿರುವುದರಿಂದ ಅವರನ್ನು ಬಿಡುಗಡೆಗೊಳಿಸಲಾಯಿತು. ಜೈಲಿಗಟ್ಟಿದ ಕಾಂಗ್ರೆಸ್ ಅವರನ್ನು ಬ್ರಿಟಿಷರಿಗಿಂತಲೂ ಕ್ರೂರವಾಗಿ ನಡೆಸಿತು. ಅವರ ಹೆಂಡತಿಮಕ್ಕಳಿಗೂ ಮಾತಾಡಲು ಅವಕಾಶ ನೀಡಲಿಲ್ಲ. ಗಾಂಧಿ ಕೊಲೆಯಾದಾಗ ಮೊರಾರ್ಜಿ ದೇಸಾಯಿ ಮುಂಬಯಿ ಸರಕಾರದ ಗೃಹಸಚಿವರಾಗಿದ್ದರು. ಗಾಂಧಿ ಹತ್ಯೆಗೊಂಡ ಬಳಿಕ ಜನ ರೊಚ್ಚಿಗೆದ್ದಿದ್ದರು. ಮೊದಲೇ ಸಾವರ್ಕರ್ ಅವರನ್ನು ಅನ್ಯಾಯವಾಗಿ ಬಂಧಿಸಿ ಜೈಲಿಗಟ್ಟಿದ್ದರಿಂದ ಜನರಿಗೆ ಅವರಮೇಲೆಯೂ ಸಂಶಯ ಉಂಟಾಗಿ ಜೀವಬೆದರಿಕೆಯಿತ್ತು. ಈ ಬಗ್ಗೆ ಸರಕಾರಕ್ಕೆ ಸಾಕಷ್ಟು ಮನವರಿಕೆ ಮಾಡಿದರೂ ಮೊರಾರ್ಜಿ ದೇಸಾಯಿ ಕ್ಯಾರ್ ಮಾಡಲೇ ಇಲ್ಲ. ಈ ವೇಳೆ ಸಾವರ್ಕರ್ ಮನೆಗೆ ದಾಳಿ ನಡೆಯಿತು. ಸರಕಾರ ರಕ್ಷಣೆ ನೀಡದಿರುವುದನ್ನು ಗಮನಿಸಿದ ಅವರ ಬಂಧುಗಳು, ಅಭಿಮಾನಿಗಳು ಮನೆಗೆ ರಕ್ಷಣೆ ನೀಡಿದರು. 


ಸಾವರ್ಕರರ ತಮ್ಮ ನಾರಾಯಣ ರಾಯನನ್ನು ಪುಂಡರ ಗುಂಪೆÇಂದು ರಸ್ತೆಯಲ್ಲಿ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ, ಅವರು ಒಂದೂವರೆ ವರ್ಷ ಹಾಸಿಗೆ ಹಿಡಿದು ಅನ್ಯಾಯವಾಗಿ ತೀರಿಕೊಂಡರು. ಸಾವರ್ಕರರ ಅಂಗರಕ್ಷಕನಾಗಿದ್ದ ಅಪ್ಪಾ ರಾಮಚಂದ್ರ ಕಾಸರ ಎಂಬವರಿಗೆ ಪೆÇಲೀಸರು ಎಷ್ಟು ಚಿತ್ರಹಿಂಸೆ ನೀಡಿದರೆಂದರೆ  ಜೈಲಿನಲ್ಲಿ ಉಗುರುಗಳನ್ನು ಕಿತ್ತು ನಾನಾ ರೀತಿಯಲ್ಲಿ ಹಿಂಸಿಸಿ ಗಾಂಧಿ ಹತ್ಯೆಯನ್ನು ಒಪ್ಪುವಂತೆ ಬಲವಂತ ಪಡಿಸಿದರು. ಆದರೆ ಪುಣ್ಯಾತ್ಮ ಶಿಕ್ಷೆಗೆ ಬಗ್ಗಲೇ ಇಲ್ಲ. ಏನೇ ತಂತ್ರ ಹೂಡಿದರೂ ಸಾವರ್ಕರ್ನನ್ನು ಕೊಲೆಗಾರ ಎಂದು ರೂಪಿಸಲು ಕಾಂಗ್ರೆಸಿಗೆ ಸಾಧ್ಯವೇ ಆಗಲಿಲ್ಲ. ಕೊನೆಗೂ ಸಾವರ್ಕರ್ ನಿರ್ದೋಶಿ ಎಂದು ಬಿಡುಗಡೆಗೊಳ್ಳಬೇಕಿತ್ತು. 

ಆದರೆ ಈ ನೆಹರೂ ಏನು ಮಾಡಿದ ಗೊತ್ತೇ? ತೀರ್ಪು ಬಂದ ತಕ್ಷಣ ಪಂಜಾಬ್ ನ್ಯಾಯಾಲಯದ ಮೂಲಕ, ಸಾವರ್ಕರ್ ಅಪಾಯ ಕಾರಿ ಎಂದು ಪಂಜಾಬ್ ಮತ್ತು ದೆಹಲಿಯಲ್ಲಿ ಮೂರು ತಿಂಗಳು ಬಹಿಷ್ಕಾರ ಹಾಕಲಾಗಿದೆ ಎಂದು ಮತ್ತೊಂದು ತೀರ್ಪು ಹೊರಡಿಸಿ, ಅವರನ್ನು ದೇಶದ್ರೋಹಿ ಎಂಬಂತೆ ಬಿಂಬಿಸಿ ಪೆÇಲೀಸ್ ಸರ್ಪ ಗಾವಲಿನಲ್ಲಿ ಮುಂಬಯಿಗೆ ಕಳಿಸಿದ! 1950ರಲ್ಲಿ ಲಿಯಾಖತ್ ಅಲಿ ಭಾರತ ಭೇಟಿಗೆ ಬಂದಾಗ ಸಾರ್ವಕರ್ ಹಿಂದುತ್ವ ನಿಷ್ಠರಾಗಿದ್ದರು ಎಂಬ ಏಕೈಕ ಕಾರಣಕ್ಕೆ ದೈಹಿಕವಾಗಿ ಜರ್ಜರಿತರಾಗಿದ್ದ ಅರವತ್ತೇಳು ವರ್ಷದ ವೃದ್ಧ ಸಾವರ್ಕರ್ರನ್ನು ಬಂಧಿಸಿ ಸರ್ಕಾರ ಬೆಳಗಾವಿ ಜೈಲಿಗೆ ಕಳಿಹಿಸಲಾಯಿತು. ಅಲ್ಲದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾರಣ ಅವರಿಗೆ ಸರಕಾರ ಕಿಂಚಿತ್ತೂ ಧನಸಹಾಯ ನೀಡಲಿಲ್ಲ. ಅವರು ಸಾಯುವವರೆಗೂ ಅವರ ಮೇಲೆ  ಗೂಢಚಾರಿಕೆ ನಡೆಸಲಾಯಿತು. 

ಸಾವರ್ಕರ್ ಅವರನ್ನು ಆರೋಪಿಯೆಂದು ಸಾಬೀತುಪಡಿಸಿ ನೇಣುಗಂಭಕ್ಕೆ ಹಾಕಲು ಇನ್ನಿಲ್ಲದಂತೆ ಪ್ರಯತ್ನಿಸಲಾಗಿತ್ತಿತ್ತು. ಆದರೆ ಸಾವರ್ಕರ್ ಅವರ ಸತ್ಯಸಂದತೆ, ನಿಷ್ಠೆ, ಜೊತೆಗೆ ಕಷ್ಟವನ್ನು ಸಹಿಸಿ, ಎದುರಿಸಬಲ್ಲೆ ಎಂಬ ಛಲ ಎಲ್ಲವೂ ಅವರನ್ನು ಆರೋಪಮುಕ್ತರನ್ನಾಗಿಸಿತ್ತು. ಆದರೆ ಎಷ್ಟೂಂತ ಕಷ್ಟಗಳನ್ನು ಸಹಿಸುವುದು? ಜೊತೆಗೆ ಹಿಂದೂಗಳಿಗೆ ಹಿಂದೂ ಎಂಬ ಹೆಸರನ್ನು ನೀಡಿದ ಸಿಂಧು ನದಿ, ಹಿಂದೂಗಳಿಗೆ ವೇದಗಳನ್ನಿತ್ತ ಆರ್ಯಾವರ್ತ ಪ್ರದೇಶ ಭಾರತದ ಹೊರಗೆ ಉಳಿದು ಪಾಕಿಸ್ತಾನ ಎಂಬ ಬೇರೆಯೇ ರಾಷ್ಟ್ರ ನಿರ್ಮಾಣವಾದದ್ದು ಅವರಿಗೆ ಸಹ್ಯವಾಗಿರಲಿಲ್ಲ. ಬ್ರಿಟಿಷರು ವಶಪಡಿಸಿಕೊಂಡಿದ್ದ ಸಾವರ್ಕರ್ ಮನೆಯನ್ನು ಸ್ವಾತಂತ್ರ್ಯಾ ನಂತರವೂ ಹಿಂದಿರುಗಿಸುವ ಸೌಜನ್ಯವನ್ನು ನೆಹರೂ ಸರ್ಕಾರ ತೋರಲಿಲ್ಲ. ಇಲ್ಲಿನ ವ್ಯವಸ್ಥೆಗೆ ತೀವ್ರ ನೊಂದುಕೊಂಡ ಸಾವರ್ಕರ್ 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ 1966ರ ಫೆಬ್ರುವರಿ 26 ರಂದು ಆತ್ಮಾರ್ಪಣೆಗೈದರು ಛೇ...

Girish Malali

ಶ್ರೀರಾಮಾಯಣದಲ್ಲಿ ಉಲ್ಲೇಖಗೊಂಡ ನಿಗೂಢ ಸ್ಥಳವಾದ `ಋಕ್ಷಬಿಲ' ಇಂದಿಗೂ ಹಾಗೆಯೇ ಇದೆಯೇ? ಋಷ್ಯಬಿಲದೊಳಗಿನ ನಿಗೂಢ ರಹಸ್ಯವೇನು ಗೊತ್ತೇ?


ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗಿದ್ದ ಸುಳಿವು ಸುಗ್ರೀವನ ಕಪಿಸೇನೆಗೆ ಲಭಿಸಿದ್ದರೂ ಸೀತೆಯನ್ನು ಆತ ಎಲ್ಲಿ ಅಡಗಿಸಿದ್ದ ಎನ್ನುವುದು ಗೊತ್ತೇ ಇರಲಿಲ್ಲ. ಒಂದು ತಿಂಗಳ ಅವಧಿಯೊಳಗಡೆ ಸೀತೆ ಎಲ್ಲಿದ್ದಾಳೆ ಎಂಬುವುದನ್ನು ಪತ್ತೆಹಚ್ಚಿ ಕೊಡಬೇಕು ಎಂದು ವಾನರ ರಾಜ ಸುಗ್ರೀವನು ಆದೇಶ ನೀಡಿದ್ದನು. ಆದರೆ ಒಂದು ತಿಂಗಳ ಅವಧಿ ಹತ್ತಿರ ಬರುತ್ತಿವುದನ್ನು ಮನಗಂಡ ಕಪಿಸೇನೆ ತೀವ್ರವಾಗಿ ನೊಂದಿತು. ತಾವು ಸೀತೆ ಇರುವ ಜಾಗವನ್ನು ಹುಡುಕದೇ ಇದ್ದರೆ ಕೋಪಿಷ್ಟನಾದ ಸುಗ್ರೀವ ರಾಜನು ನಮಗೆ ದಂಡನೆ ವಿಧಿಸಬಹುದು, ಪ್ರಭಾವಶಾಲಿಯಾದ ಶ್ರೀರಾಮನಿಗೂ ಕಪಿಸೇನೆ ಹೆದರಿ, ಕೊನೆಗೆ ಹಠದಿಂದ ಬಿಡದೆ ಹುಡುಕೋಣ, ಗೆದ್ದರೂ ಗೆಲ್ಲಬಹುದು ಎಂದು ಇನ್ನೊಮ್ಮೆ ಹುಡುಕಲು ಆರಂಭಿಸಿದರು. 

ಅವರು ರಜತಪರ್ವತದಲ್ಲಿ ಹುಡುಕಲಾರಂಭಿಸಿದರು. ಅದು ಬಿಳುಪಾದ ಪರ್ವತವಾಗಿದ್ದು ಅದರ ಬುಡದಿಂದ ತುದಿಯವರೆಗೆ ಹುಡುಕಲಾರಂಭಿಸಿದರು. ಆ ಬಳಿಕ ವಿಂಧ್ಯ ಪರ್ವತವನ್ನು ಜಾಲಾಡಿದರು. ಎಲ್ಲಾ ಮುಗಿದಾಗ ಸುಗ್ರೀವ ನೀಡಿದ್ದ ಒಂದು ತಿಂಗಳ ಗಡುವು ಮುಗಿದಾಗಿತ್ತು. ಆದರೂ ಮತ್ತೆ ಮತ್ತೆ ಇದ್ದಬಿದ್ದ ಎಲ್ಲಾ ಗುಹೆಗಳನ್ನು ಬಿಡದೆ ಹುಡುಕಲಾರಂಭಿಸಿದರು. ಹಸಿವು, ನೀರಡಿಕೆಗಳಿಂದ ಬಳಲಿದ ಕಪಿಸೇನೆ ಪ್ರಾಣ ಉಳಿಸಿಕೊಳ್ಳಲು ನೀರಾದರೂ ಸಿಗುವುದೇ ಎಂದು ಹುಡುಕಲಾರಂಭಿಸಿದರು. ಆದರೆ ಅಲ್ಲೊಂದು ಅಚ್ಚರಿ ಕಾದಿತ್ತು. ದೂರದಲ್ಲಿ ನೋಡಿದಾಗ ಒಂದು ನಿಗೂಢವಾಗಿರುವ ಬಿಲವೊಂದು ಕಾಣಿಸಿತು.

ಆ ಬಿಲದ ಹೆಸರು ಋಕ್ಷಬಿಲ!

ಅದರ ದ್ವಾರವು ಮರಬಳ್ಳಿಗಳಿಂದ ಮುಚ್ಚಿಹೋಗಿತ್ತು. ಅಲ್ಲೇ ನಿಂತು ಏನು ಮಾಡುವುದು ಎಂದು ಯೋಚಿಸಿದಾಗ ಕ್ರೌಂಚ, ಹಂಸ, ಸಾರಸ ಮುಂತಾದ ಪಕ್ಷಿಗಳು ಅಲ್ಲಿಂದ ಹಾರಿ ಹೊರಗಡೆ ಬರುತ್ತಿರುವುದನ್ನು ಕಂಡರು. ನೀರಿನ ಬಿಂದುಗಳು ತಾವರೆ ಹೂವಿನಲ್ಲಿ ಅಂಟಿಕೊಂಡು ಕೆಂಪಾಗಿ ಕಾಣುತ್ತಿತ್ತು. ಅದರಿಂದ ಮೋಹಕವಾದ ಪರಿಮಳವು ಎಲ್ಲೆಡೆ ಹರಡಿತ್ತು. ಆದರೆ ಆ ಬಿಲವು ನಿಗೂಢವೂ, ಘೋರವಾಗಿಯೂ ಇದ್ದುದರಿಂದ ಅದರ ಒಳಗಡೆ ಹೋಗುವಂತಿರಲಿಲ್ಲ. ಹಸಿವಿನಿಂದ ಬಳಲಿದ್ದ ಅವರಿಗೆ ಹನುಮಂತನು, `ವ್ಯರ್ಥವಾದ ಹುಡುಕಾಟದಿಂದ ನಾವೆಲ್ಲಾ ಬಳಲಿದ್ದೇವೆ. ಈ ಬಿಲದೊಳಗಡೆ ನೀರಿರುವುದು ಜಲಚರ ಪಕ್ಷಿಗಳಿಂದ ಗೊತ್ತಾಗುತ್ತದೆ. ಈ ಬಿಲದ ದ್ವಾರದಲ್ಲಿ ಹಚ್ಚಹಸುರಾದ ಮರಗಳು ಬೆಳೆದುನಿಂತಿರುವುದು ಕಾಣಿಸುತ್ತಿದೆ. ಆದ್ದರಿಂದ ಹೇಗಾದರೂ ಮಾಡಿ ಈ ಬಿಲದೊಳಗಡೆ ಪ್ರವೇಶಿಸೋಣ' ಎಂದು ತಿಳಿಸಿದನು.

ಒಳಗಡೆ ಗವ್ ಎನ್ನುವ ಕತ್ತಲೆ. ಯಾರಿಗೂ ಏನೂ ಕಾಣಿಸುತ್ತಿರಲಿಲ್ಲ. ವಾನರೆಲ್ಲರೂ ಒಬ್ಬರನೊಬ್ಬರು ಕೈಯ್ಯನ್ನು ಸರಪಳಿಯಾಗಿ ಹಿಡಿದು ತಡಕಾಡುತ್ತಾ ಹೆಜ್ಜೆಯ ಮೇಲೆ ಹೆಜ್ಜೆನ್ನಿಟ್ಟು ಮುಂದುವರಿಯಲಾರಂಭಿಸಿದರು. ಸುಮಾರು ಒಂದು ಯೋಜನದಷ್ಟು ನಡೆದಾಗ ಆ ಪ್ರದೇಶ ರಮ್ಯರಮಣೀಯವಾಗಿರುವುದು, ದಿವ್ಯವಾದ ಬೆಳಕಿನಿಂದ ಹೊಳೆಯುತ್ತಿರುವುದು ಕಾಣಿಸಿತು. ವಿವರಿಸಲೂ ಸಾಧ್ಯವಾಗದ ರೀತಿಯ ಸ್ವರ್ಗೀಯ ರೀತಿಯಲ್ಲಿರುವ ಸುಂದರವಾದ ಉದ್ಯಾನವನ್ನು ಕಂಡು ಎಲ್ಲರೂ ಮೈಮರೆತರು. ಪುಷ್ಪಭರಿತವಾದ, ಫಲಭರಿತವಾದ ಸುಂದರವಾದ ವೃಕ್ಷಗಳು ಬಂಗಾರದ ಪ್ರಕಾಶದಿಂದ ಹೊಳೆಯುವ ಪ್ರದೇಶವು ಬೇರೊಂದು ಲೋಕವನ್ನೇ ನೆನಪಿಸುವಂತಿತ್ತು. ಹವಳದ ಮಣಿಗಳಂತೆ ಹೊಳೆಯುವ ಪುಷ್ಫಗಳು ಮಕರಂದವನ್ನು ಹೀರುವ ಚಿನ್ನದಂತೆ ಹೊಳೆಯುವ ದುಂಬಿಗಳು, ರತ್ನಪ್ರಕಾಶವುಳ್ಳ ಹೊಳೆಯುವ ಶುಭ್ರನೀರಿನ ಕೊಳಗಳು, ಅದರಲ್ಲಿ ಕೆಂಪಾಗಿ ಹೊಳೆಯುವ ತಾವರೆಗಳು, ಸುವರ್ಣ ವರ್ಣದ ಮೀನುಗಳು, ಬೃಹದಾಕಾರದ ಆಮೆಗಳು, ಬೆಳ್ಳಿ ಬಂಗಾರದಿಂದ ನಿರ್ಮಿತವಾಗಿರುವಂಥಾ ಸುಂದರವಾದ ಗೃಹಗಳು, ಅವುಗಳಿಗೆ ಮುತ್ತಿನ ಗೊಂಚಲುಗಳಿಂದ ಅಲಂಕೃತವಾದ ಚಿನ್ನದ ಕಿಟಕಿಗಳು, ವಜ್ರ ವೈಢೂರ್ಯಗಳಿಂದ ಭೂಷಿತವಾದ ಬಾಗಿಲುಗಳು, ರತ್ನಖಚಿತವಾದ ಮಂಚಗಳು, ಪೀಠಗಳು, ಅವುಗಳ ಮೇಲೆ ಸುಗಂಧ ದ್ರವ್ಯಗಳು, ಶುಚಿರುಚಿಯಾದ ಖಾದ್ಯಗಳು, ಕಂದಮೂಲ ಫಲಗಳು, ಬಗೆಬಗೆಯ ಪರಿಮಳಯುಕ್ತ ಪೇಯಗಳು, ಹೊಚ್ಚಹೊಸ ಜೇನು ತುಂಬಿದ ಪಾತ್ರೆಗಳು, ಜೊತೆಗೆ ದಿವ್ಯವಾದ ವಸ್ತ್ರಗಳ ರಾಶಿ, ಬೆಂಕಿಯ ಜ್ವಾಲೆಯಂತೆ ಹೊಳೆಯುವ ಚಿನ್ನದ ಇಟ್ಟಿಗೆಗಳು ತುಂಬಿದ್ದವು. ಇದನ್ನು ನೋಡಿ ಕಪಿವೀರರೆಲ್ಲಾ ಅಚ್ಚರಿಯಿಂದ ಅವಲೋಕಿಸುತ್ತಿದ್ದರು.

ಇದರ ನಡುವೆ ನಾರುಮುಡಿ, ಕೃಷ್ಣಾಜಿನಗಳನ್ನು ಇಟ್ಟು ತಪೋನಿರತಳಾದ ಸ್ತ್ರೀಯೋರ್ವಳನ್ನು ಕಂಡರು. ಅವಳ ತೇಜಸ್ಸನ್ನು ನೋಡಿ ಎಲ್ಲರೋ ಒಮ್ಮೆಲೆ ಸ್ಥಬ್ದರಾಗಿ ನಿಂತಿದ್ದರು. ಇವರ ಪೈಕಿ ಹನುಮಂತನೊಬ್ಬನು ಧೈರ್ಯದಿಂದ ಮುಂದೆ ಬಂದು ಆಕೆಯ ಮುಂದೆ ಮಂಡಿಯೂರಿ ಕೈಮುಗಿದು ನಿಂತನು. `ದೇವಿ ನೀನ್ಯಾರು? ಈ ಭವನವೂ ಬಿಲವೂ ಯಾರದ್ದು? ಈ ಉತ್ತಮೋತ್ತವಾದ ವಸ್ತುಗಳು ಯಾರಿಗೆ ಸೇರಿದ್ದು? ನಾವೆಲ್ಲಿದ್ದೇವೆಂದೇ ತಿಳಿಯುತ್ತಿಲ್ಲ.  ಹಸಿವು ಬಾಯಾರಿಕೆಗಳಿಂದ ಬಳಲಿರುವ ನಾವು, ಬಿಲದಿಂದ ಪಕ್ಷಿಗಳು ಹೊರಬರುತ್ತಿರುವುದನ್ನು ಕಂಡು ನೀರನ್ನು ಅರಸುತ್ತಾ ಇಲ್ಲಿಯವರೆಗೆ ಬಂದೆವು. ಯಾರ ತಪಸ್ಸಿನಿಂದ ಇದರ ಸೃಷ್ಟಿಯಾಯಿತು?' ಎಂದು ಕುತೂಹಲದಿಂದ ಕೇಳಿಕೊಂಡನು. 

ಅದಕ್ಕೆ ಆ ತಪಸ್ವಿಯು ಉತ್ತರಿಸಿ, `ಮಯನೆಂಬ ಅಸುರ ಶಿಲ್ಪಿಯು ತನ್ನ ದಿವ್ಯಪ್ರಭಾವದಿಂದ ಈ ಉದ್ಯಾನವನ್ನು ಸೃಷ್ಟಿಸಿದನು. ಸಾವಿರಾರು ವರ್ಷಗಳ ತಪಸ್ಸಿನಿಂದ ಬ್ರಹ್ಮನಿಂದ ಶಿಲ್ಪವಿದ್ಯೆಯನ್ನು ವರವಾಗಿ ಪಡೆದ ಆತನು ಈ ವನವನ್ನು ನಿರ್ಮಿಸಿ ಹೇಮೆ ಎಂಬ ಅಪ್ಸರ ಸ್ತ್ರೀಯೊಂದಿಗೆ ಇಲ್ಲಿ ಸುಖವಾಗಿ ವಾಸಿಸುತ್ತಿದ್ದನು. ಯುದ್ಧದಲ್ಲಿ ಇಂದ್ರನು ಮಯನನ್ನು ಸೋಲಿಸಿ ಕೊಂದ ಬಳಿಕ ಬ್ರಹ್ಮನು ಹೇಮೆಗೆ ಈ ವನವನ್ನು ಒಪ್ಪಿಸಿದನು. ನಾನು ಮೇರುಸಾವರ್ಣಿಯ ಮಗಳಾದ ಸ್ವಯಂಪ್ರಭೆ ಎಂದು ನನ್ನ ಹೆಸರು. ಹೇಮೆ ನನ್ನ ಗೆಳತಿಯಾಗಿದ್ದು, ಅವಳ ವನವನ್ನು ರಕ್ಷಿಸಿಕೊಂಡು ಬರುತ್ತಿದ್ದೇನೆ. ನೀವ್ಯಾರು? ಯಾಕಾಗಿ ಈ ವನವನ್ನು ಸುತ್ತಾಡುತ್ತಿದ್ದೀರಿ? ಇಲ್ಲಿನ ಫಲಮೂಲಗಳನ್ನು ತಿಂದು ವಿಶ್ರಮಿಸಿಕೊಳ್ಳಿರಿ, ಇಲ್ಲಿನ ನೀರನ್ನು ಕುಡಿದು ಬಾಯಾರಿಕೆಯನ್ನು ತಣಿಸಿಕೊಳ್ಳಿರಿ. ಆಮೇಲೆ ನಿಮ್ಮ ವೃತ್ತಾಂತವನ್ನು ತಿಳಿಸಿರಿ..' ಎಂದಳು.

ಅವಳು ಹೇಳಿದಂತೆ ಅಲ್ಲಿನ ದಿವ್ಯಫಲಗಳನ್ನು ಭಕ್ಷಿಸಿ, ನೀರನ್ನು ಕುಡಿದು ಆಯಾಸವನ್ನು ಪರಿಹರಿಸಿಕೊಂಡರು. ಹನುಮಂತನೇ ಮುಂದಾಗಿ ನಿಂತು, ಭಗವಾನ್ ಶ್ರೀರಾಮನಿಗೆ ಒದಗಿದ ಸಂಕಷ್ಟ, ಶ್ರೀರಾಮನಿಗೆ ಅಗ್ನಿಸಾಕ್ಷಿಯಾಗಿ ಸುಗ್ರೀವನ ಜೊತೆ ಉಂಟಾದ ಸ್ನೇಹ, ಸುಗ್ರೀವನು ಸೀತೆಯನ್ನು ಹುಡುಕಾಡಲು ತಮಗೊಪ್ಪಿಸಿದ ಕರ್ತವ್ಯ, ಸೀತೆ ಎಲ್ಲಿರುವಳೆಂದು ತಾವು ನಡೆಸುವ ಹುಡುಕಾಟದ ಬಗ್ಗೆ ತಿಳಿಸಿದನು. ಆ ಬಳಿಕ ಹನುಮಂತನು, `ತಾಯಿ ಬಳಲಿದ್ದ ನಮಗೆ ಬಳಲಿದ್ದ ನಮಗೆ ಉಪಚಾರವನ್ನು ನೀಡಿದೆ. ಈ ಆತಿಥ್ಯಕ್ಕೆ ಪ್ರತಿಯಾಗಿ ನಾವು ಮಾಡಬಹುದಾದ ಕಾರ್ಯವೇನೇ ಇದ್ದರು ತಿಳಿಸು, ಸಂತೋಷವಾಗಿ ಮಾಡಿಕೊಡುವೆವು' ಎಂದು ತಿಳಿಸಿದನು. 

ಸ್ವಯಂಪ್ರಭೆಯು ಸ್ವಲ್ಪಹೊತ್ತು ಯೋಚಿಸಿಕೊಂಡು ಸುಮ್ಮನಾದಳು. ಕೊನೆಗೆ ಕೊಂಚ ಆಲೋಚಿಸಿದ ಹನುಮಂತನು, `ಸೀತಾನ್ವೇಷಣೆಗಾಗಿ ಮತ್ತೆ ನಾವು ಹಿಂತಿರುಗಬೇಕು. ಈ ಗವಿಯಿಂದ ಹೊರಗಡೆ ಹೋಗುವುದು ಹೇಗೆಂದು ತಿಳಿಸು' ಎಂದು ಭಿನ್ನವಿಸಿಕೊಂಡನು. ಆಗ ಸ್ವಯಂಪ್ರಭೆಯು, `ಸಾಮಾನ್ಯವಾಗಿ ಇದನ್ನು ಪ್ರವೇಶಿಸಿದ ಯಾರಿಗೂ ಇಲ್ಲಿಂದ ಹೊರಗಡೆ ಹೋಗಲು ಸಾಧ್ಯವಿಲ್ಲ. ಆದರೆ ನನ್ನ ಯೋಗಶಕ್ತಿಯಿಂದ ನಿಮ್ಮನ್ನೆಲ್ಲಾ ಹೊರಗಡೆ ಬಿಡುತ್ತೇನೆ. ಈಗ ಎಲ್ಲರೂ ಕಣ್ಣುಮುಚ್ಚಿಕೊಳ್ಳಿ. ನಾನು ಹೇಳುವವರೆಗೆ ಯಾರೂ ಕಣ್ಣುಬಿಡಬೇಡಿ.' ಎಂದಳು. ಅಂತೆಯೇ ಎಲ್ಲರೂ ತಮ್ಮ ಅಂಗೈಗಳಿಂದ ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ನಿಮಿಷಾರ್ಧದಲ್ಲಿ ಬಿಲದಿಂದ ಹೊರಗಡೆ ಬಿದ್ದಿದ್ದರು. 

ಸ್ವಯಂ ಪ್ರಭೆಯು, `ನೋಡಿ ಅಲ್ಲಿ ವಿಸ್ತಾರವೂ, ಭೀಕರವೂ ಆಗಿರುವ ಸಮುದ್ರವೊಂದಿದೆ. ಈ ಭಾಗದಲ್ಲಿ ಪರ್ವತವಿದೆ. ನಿಮಗೆ ಇಷ್ಟಬಂದ ದಾರಿಯನ್ನು ಹುಡುಕಿಕೊಳ್ಳಿ' ಎಂದು ಹೇಳಿ ಮತ್ತೆ ತನ್ನ ಬಿಲದೊಳಗಡೆ ಹೊರಟುಹೋದಳು. ಸ್ವಯಂಪ್ರಭೆ ಆ ಸಮುದ್ರವನ್ನು `ಮಹೋದಧಿ' ಎಂದು ಕರೆದಿದ್ದಳು. ವರುಣದೇವನ ಆವಾಸಸ್ಥಾನವಾಗಿದ್ದ ಆ ಸಮುದ್ರವು ಭೀಕರವೂ, ರೌದ್ರವೂ ಆಗಿತ್ತು. 

ಭೋರ್ಗರೆಯುವ ಸಮುದ್ರವನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದರು. ಸೀತೆಯನ್ನು ಕಾಣದೆ ವಾಪಸ್ ಹೋಗುವಂತಿರಲಿಲ್ಲ. ತಮ್ಮೊಡೆಯ ಸುಗ್ರೀವನು ತಮಗೇನಾದರೂ ಅಪಾಯ ಮಾಡಿದರೆ ಎಂಬ ಭಯವೂ ಆಯಿತು. ಸುಗ್ರೀವನಲ್ಲಿ ಕ್ಷಮೆ ಕೇಳುವಂತೆಯೂ ಇರಲಿಲ್ಲ. ಹತಾಶೆಯಿಂದ ಕೆಲವರು ಮತ್ತೆ ಬಿಲದೊಳಗಡೆ ಪ್ರವೇಶಿಸಿ ಅಲ್ಲೇ ಇದ್ದುಬಿಡೋಣ ಎಂದರು. ಕೊನೆಗೆ ವಾಲಿಯ ಪುತ್ರ ಅಂಗದನು ಎಲ್ಲರಿಗೂ ಸಮಾಧಾನ ಹೇಳಿ ಪ್ರಯತ್ನವನ್ನು ಬಿಡುವುದು ಬೇಡ. ತಾಳ್ಮೆಯಿಂದ ಪ್ರಯತ್ನಿಸಿದರೆ ಸೀತೆಯ ಸುಳಿವು ಖಂಡಿತಾ ಸಿಗಬಹುದು. ಪ್ರಯತ್ನವನ್ನೂ ಮೀರಿಯೂ ಸೀತೆಯು ಸಿಗದಿದ್ದರೆ ಸುಗ್ರೀವನು ತಮ್ಮನ್ನು ಕ್ಷಮಿಸಿಯಾನು ಎಂದು ಧೈರ್ಯವನ್ನು ಹೇಳಿದನು. ಆದರೂ ಕೆಲವರಿಗೆ ಧೈರ್ಯ ಬರಲಿಲ್ಲ. ಮತ್ತೆ ಬಿಲದೊಳಗಡೆ ಹೋಗಿ ಅಲ್ಲೆ ಶಾಶ್ವತವಾಗಿ ಇದ್ದುಬಿಡೋಣ ಎಂದು ಹೇಳಿದರು. 

ಆಗ ಹನುಮಂತನು ಕೊಂಚ ಆಲೋಚಿಸಿ,` ಮನುಷ್ಯಂತೆಯೇ ಕಪಿಗಳ ಮನಸ್ಸು ಇನ್ನೂ ಚಂಚಲ. ಋಕ್ಷಬಿಲಕ್ಕೆ ಹೋದ ಬಳಿಕ ಅಲ್ಲಿ ತನ್ನ ಹೆಂಡತಿ ಮಕ್ಕಳ ಯೋಚನೆ ಬರುತ್ತದೆ. ಆದ್ದರಿಂದ ಕಿಷ್ಮಿಂದೆಗೆ ಹೋಗಿ ಸುಗ್ರೀವನಲ್ಲಿ ಜೀವದಾನ ಬೇಡೋಣ' ಎಂದನು. ಆದರೆ ಅದಕ್ಕೆ ಅಂಗದನು ಒಪ್ಪಲಿಲ್ಲ. `ಸುಗ್ರೀವನು ರಾಮನಲ್ಲಿ ಅಗ್ನಿಸಾಕ್ಷಿಯಾಗಿ ಸ್ನೇಹವನ್ನು ಒಪ್ಪಿಕೊಂಡ ಮೇಲೆ ಅದಕ್ಕೆ ಅವಕಾಶ ಕೊಡಲಾರನು. ನೀವು ಬೇಕಾದರೆ ಕಿಷ್ಕಿಂದೆಗೆ ವಾಪಸ್ ಹೋಗಿ ನಾನಿಲ್ಲೇ ಪ್ರಾಯಾಪವೇಶ ಮಾಡುತ್ತೇನೆ' ಎಂದನು. ಅಂಗದನ ಮಾತು ಕೇಳಿ ಎಲ್ಲರಿಗೂ ಬೇಸರ ಮೂಡಿ ತಾವೂ ಆತನ ಜೊತೆ ಪ್ರಾಯಾಪವೇಶ ಮಾಡುವುದಾಗಿ ನಿರ್ಧಾರಕ್ಕೆ ಬಂದರು. 

ಪರ್ವತದ ಗುಹೆಯಲ್ಲಿ ಸಂಪಾತಿ ಎನ್ನುವ ಹದ್ದು ವಾಸವಾಗಿತ್ತು. ವೃದ್ಧನಾಗಿದ್ದ ಸಂಪಾತಿ ಸೀತೆಗಾಗಿ ಪ್ರಾಣವನ್ನರ್ಪಿಸಿದ ಜಟಾಯುವಿನ ಅಣ್ಣ. ಸಂಪಾತಿಯು ಕಪಿಗಳನ್ನು ಕಂಡು ಅವುಗಳನ್ನು ತಿನ್ನಲೆಂದು ಬಂದಾಗ, ಅಂಗದನು, `ಜಟಾಯುವಿನಂಥಾ ಪಕ್ಷಿ ಪ್ರಾಣಿಗಳು ಶ್ರೀರಾಮನಿಗೆ ಸಹಾಯ ಮಾಡಿವೆ. ಜಟಾಯುವು ಸೀತೆಗಾಗಿ ಪ್ರಾಣವನ್ನೇ ಅರ್ಪಿಸಿತು. ಈಗ ಈ ಹದ್ದಿನಿಂದಾಗಿ ತಮ್ಮ ಪ್ರಾಣಕ್ಕೆ ಸಂಕಟ ಒದಗಿತು' ಎಂದು ಹಲುಬಿದನು. ಸಂಪಾತಿಗೆ ಅಂಗದನ ಮಾತು ಕೇಳಿ ದುಃಖವಾಯಿತು. ತನ್ನ ಪ್ರೀತಿಯ ಸಹೋದರ ಸತ್ತನೇ ಎಂದು ಮರುಕಗೊಂಡನು ಅಂಗದನಿಂದ ಎಲ್ಲಾ ವಿಚಾರವನ್ನು ಅರಿತುಕೊಂಡ ಸಂಪಾತಿಯು, `ತಾನು ವೃದ್ಧನಾಗಿರುವುದರಿಂದ ಹಾರಲು ಸಾಧ್ಯವಾಗುತ್ತಿಲ್ಲ. ಹಾರಲು ಸಾಧ್ಯವಿದ್ದಾಗ ಮೂರು ಲೋಕ, ಸಪ್ತಸಾಗರಗಳನ್ನೂ ಕಂಡಿದ್ದೇನೆ. ರಾವಣನು ಸೀತೆಯನ್ನು ಹೊತ್ತುಕೊಂಡು ಹೋಗಿರುವುದನ್ನು ಕಂಡಿದ್ದೇನೆ. ಇಲ್ಲಿಂದ ನೂರು ಯೋಜನದಷ್ಟು ಲಂಕೆಯೆಂಬ ದ್ವೀಪವಿದ್ದು, ಅದರ ರಾಜ ರಾವಣನಾಗಿದ್ದಾನೆ. ಹದ್ದುಗಳ ಕಣ್ಣುಗಳು ಸೂಕ್ಷ್ಮವಾಗಿದ್ದು, ಸೀತೆಯು ಲಂಕೆಯಲ್ಲಿರುವುದು ನನ್ನ ಕಣ್ಣಿಗೆ ಗೋಚರವಾಗುತ್ತದೆ. ಸಾಗರವನ್ನು ಲಂಘಿಸಿದರೆ ಲಂಕೆಯು ದೊರಕುತ್ತದೆ. ಅಲ್ಲಿ ರಾಕ್ಷಸಿಯ ಕಾವಲಿನಲ್ಲಿ ಸೀತೆಯಿದ್ದಾಳೆ' ಎಂದು ಉತ್ತರಿಸಿದನು. ಸಂಪಾತಿಯ ಮಾತು ಕೇಳಿ ಎಲ್ಲರೂ ಹರ್ಷಿತರಾದರು.

ಅದುವೇ ಹಿಂದೂ ಮಹಾಸಾಗರವಾಗಿದ್ದು, ಮುಂದೆ ವಾನರ ವೀರನಾದ ನಲನು ಅದಕ್ಕೆ ಶ್ರೀರಾಮನ ಕೃಪೆಯಿಂದ ಸೇತುವೆ ನಿರ್ಮಿಸಿದ್ದನು. ಅದುವೇ ನಲಸೇತು ಅಥವಾ ರಾಮಸೇತು ಎಂದು ಹೆಸರು ಪಡೆದಿದ್ದು, ಸಮುದ್ರದೊಳಗಡೆ ಹುದುಗಿಹೋಗಿದೆ. ಮಹಾಭಾರತ ಕಾಲವಾದ ದ್ವಾಪರಯುಗದವರೆಗೂ ಅದು ಕಾಣಿಸಿದ್ದು, ಲಂಕೆಯಿಂದ ಭಾರತಕ್ಕೆ ಅದರಿಂದಲೇ ನಡೆದುಕೊಂಡು ಬರುತ್ತಿದ್ದರು. ಆದರೆ ಮುಂದೆ ಪ್ರಕೃತಿಯಲ್ಲಿ ಆದ ಬದಲಾವಣೆಯಿಂದ ರಾಮಸೇತು ನೀರಲ್ಲಿ ಮುಳುಗಡೆಗೊಂಡಿದ್ದು, ಇಂದಿಗೂ ಅದರ ಸುಳಿವು ಲಭ್ಯವಿದೆ. 

ಇಲ್ಲಿ ತಿಳಿಸಿದ ಋಕ್ಷಬಿಲ ಇಂದಿಗೂ ನಿಗೂಢವಾಗಿಯೇ ಉಳಿದಿದ್ದು, ದಕ್ಷಿಣ ಭಾರತದಲ್ಲಿ ಇಂದಿಗೂ ಹಾಗೆಯೇ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೇರಳದ ಕಾಡಿನಿಂದಾವೃತವಾದ ಪ್ರದೇಶದಲ್ಲಿ ಋಷ್ಯಬಿಲವಿದ್ದು, ಇಂದಿಗೂ ಅದು ನಿಗೂಢವಾಗಿಯೇ ಉಳಿದಿದೆ. ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಿದ ಪರ್ವತ, ಮರ, ಹಣ್ಣು, ಕಾಡಿನಲ್ಲಿರುವ ವಿವಿಧ ಪಕ್ಷಿ-ಪ್ರಾಣಿ ಸಂಕುಲ, ಕಪಿವೀರರು ಸಂದರ್ಶಿಸಿದ ಜಾಗ, ರಾಮನು ಅಯೋಧ್ಯೆಯಿಂದ ಲಂಕೆಯವರೆಗೆ ಬಂದಿರುವ ಜಾಗ, ಕಿಷ್ಕಿಂದೆ, ಚಿತ್ರಕೂಟ ಅರಣ್ಯ ಅಲ್ಲದೆ ಶ್ರೀರಾಮ ಸೀತೆಯೊಂದಿಗೆ ಪುಷ್ಪಕವಿಮಾನದಲ್ಲಿ ಬರುವಾಗ ಆಕಾಶ ಮಾರ್ಗದಲ್ಲಿ ಕಂಡುಬಂದ ಪ್ರದೇಶಗಳು ಇಂದಿಗೂ ಭೂಪಟದಲ್ಲಿ ನಕ್ಷೆಯನ್ನು ಗುರುತಿಸಿದಂತೆ ಸ್ಪಷ್ಟವಾಗಿ ಕಂಡುಬರುತ್ತಿದೆ. ರಾಮಾಯಣದಲ್ಲಿ ಉಲ್ಲೇಖಗೊಂಡ ಪ್ರತಿಯೊಂದೂ ಪ್ರದೇಶವೂ ಇಂದಿಗೂ ಇದ್ದು, ಆದರೆ ಋಷ್ಯಬಿಲ ಎಲ್ಲಿದೆ ಎಂದು ನಿಗೂಢವಾಗಿಯೇ ಉಳಿದಿದೆ. 

Girish Malali